ADVERTISEMENT

ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ, ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮೇ 2023, 14:47 IST
Last Updated 30 ಮೇ 2023, 14:47 IST
ತೋರಣಗಲ್ಲು ಸಮೀಪದ ಬಿಟಿಪಿಎಸ್ ಘಟಕದ ಹೊರ ಆವರಣದಲ್ಲಿ ಮಂಗಳವಾರ ನಡೆದ ಸಿಐಟಿಯುನ 53ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯಸ್ವಾಮಿ ಮಾತನಾಡಿದರು
ತೋರಣಗಲ್ಲು ಸಮೀಪದ ಬಿಟಿಪಿಎಸ್ ಘಟಕದ ಹೊರ ಆವರಣದಲ್ಲಿ ಮಂಗಳವಾರ ನಡೆದ ಸಿಐಟಿಯುನ 53ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯಸ್ವಾಮಿ ಮಾತನಾಡಿದರು   

ತೋರಣಗಲ್ಲು: ‘ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನ, ಹೆರಿಗೆ ರಜೆಯ ಸೌಲಭ್ಯ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಜಾರಿಗೊಳಿಸಬೇಕು’ ಎಂದು ಬಳ್ಳಾರಿ ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ಜೆ.ಎಂ.ಚೆನ್ನಬಸಯ್ಯಸ್ವಾಮಿ ಹೇಳಿದರು.

ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಘಟಕದ ಹೊರ ಆವರಣದಲ್ಲಿ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಿಐಟಿಯು ನ 53ನೇ ವರ್ಷದ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ, ಅವರು ಮಾತನಾಡಿದರು.

‘ಜಿಂದಾಲ್ ಸೇರಿದಂತೆ ಸುತ್ತಲಿನ ಸಣ್ಣ, ಬೃಹತ್ ಕಾರ್ಖಾನೆಗಳಲ್ಲಿ ಮಹಿಳಾ, ಪುರುಷ ಕಾರ್ಮಿಕರು ಕಡಿಮೆ ವೇತನ, ಕೆಲಸದ ಅವದಿ, ಇಪಿಎಫ್, ಇಎಸ್‍ಐ ಹಾಗೂ ರಜೆ ಸೇರಿದಂತೆ ಇತರ ಸೌಲಭ್ಯಗಳ ವಿಚಾರವಾಗಿ ಗುತ್ತಿಗೆದಾರರಿಂದ ಶೋಷಣೆಗೆ ಒಳಾಗುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಂಬಂಧಪಟ್ಟ ರಾಜ್ಯ, ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ ಹಾಗೂ ಕಾರ್ಮಿಕರಿಂದ ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.

ADVERTISEMENT

ಸಿಐಟಿಯು ನ 53ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಬಿಟಿಪಿಎಸ್ ಗುತ್ತಿಗೆ ಕಾರ್ಮಿಕ ಸಂಘದ ಎಂ.ತಿಪ್ಪೇಸ್ವಾಮಿ ನೆರವೇರಿಸಿದರು.

ಗುತ್ತಿಗೆ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ ಜಗದೀಶ್, ರುದ್ರಮ್ಮ, ಪ್ರಧಾನ ಕಾರ್ಯದರ್ಶಿ ಮಲಿಯಪ್ಪ, ಮುಖಂಡರಾದ ಪಾಂಡು, ಎಂ.ಪಿ.ತಿಮ್ಮಪ್ಪ, ಅಂಜಿನಪ್ಪ, ಜಗದೀಶ್, ಹುಚ್ಚಮ್ಮ, ನಳಿನಿ, ಗಾಧಿಲಿಂಗಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.