ADVERTISEMENT

ಹಂಪಾಪಟ್ಟಣಕ್ಕೆ ಹೆಚ್ಚುವರಿ ಬಸ್‌ ಓಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 10:46 IST
Last Updated 15 ಜುಲೈ 2019, 10:46 IST
ಹಂಪಾಪಟ್ಟಣಕ್ಕೆ ಬಸ್‌ ಓಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಹಂಪಾಪಟ್ಟಣಕ್ಕೆ ಬಸ್‌ ಓಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ಗ್ರಾಮಸ್ಥರು ಹಾಗೂ ಕಾಲೇಜು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಸಂಬಂಧ ಸೋಮವಾರ ಗ್ರಾಮಸ್ಥರು ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಸೀನಯ್ಯ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಗ್ರಾಮದಿಂದ ನಿತ್ಯ ನೂರಕ್ಕೂ ಹೆಚ್ಚು ಶಾಲಾ–ಕಾಲೇಜಿನ ವಿದ್ಯಾರ್ಥಿಗಳು, ದೈನಂದಿನ ಕೆಲಸಕ್ಕೆ ಜನ ಹೋಗುತ್ತಾರೆ. ಆದರೆ, ಬೆಳಿಗ್ಗೆ ಒಂದು ಬಸ್‌ ಮಾತ್ರ ಗ್ರಾಮಕ್ಕೆ ಬರುತ್ತದೆ. ಇದರಿಂದಾಗಿ ನಿತ್ಯ ದಟ್ಟಣೆ ಉಂಟಾಗುತ್ತಿದೆ. ಅನೇಕರಿಗೆ ಶಾಲಾ–ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಜನ ಓಡಾಡುವುದರಿಂದ ಗ್ರಾಮಕ್ಕೆ ಕನಿಷ್ಠ ಮೂರು ಬಸ್‌ಗಳನ್ನು ಓಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಮನಗಂಡು ಕೂಡಲೇ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು‘ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಮುಖಂಡರಾದ ಕೇಶವಮೂರ್ತಿ, ಟಿ. ತಿಮ್ಮೇಶ್ ನಾಯಕ, ಶರಣಪ್ಪ, ಮಾರುತಿ ಸೋಮಣ್ಣ, ನಿಂಗಪ್ಪ ಎಚ್. ಪ್ರಕಾಶ, ಕಾಲೇಜು ವಿದ್ಯಾರ್ಥಿಗಳಾದ ಮಹಾಂತೇಶ್‌, ಯು. ಮಹೇಂದ್ರ, ಸೋಮಣ್ಣ, ಸಂಜಯ, ಹುಲುಗಪ್ಪ ಮನವಿಗೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.