ADVERTISEMENT

ಸಚಿವ ಸುರೇಶಕುಮಾರ ವಜಾಕ್ಕೆ ಆಗ್ರಹ

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 12:30 IST
Last Updated 14 ನವೆಂಬರ್ 2019, 12:30 IST
   

ಹೊಸಪೇಟೆ: ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿರುವ ಶಿಕ್ಷಣ ಸಚಿವ ಸುರೇಶ ಕುಮಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ‘ಹೊಸಪೇಟೆ ಸ್ಲಂ ಸಮಿತಿ’ ಸಂಚಾಲಕ ರಾಮಚಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ‘ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿರುವ ಅಧಿಕಾರಿ ವರ್ಗದ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಈ ವಿಷಯದಲ್ಲಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸಂವಿಧಾನದ ನಿರ್ಮಾತೃಗೆ ಅವಮಾನ ಮಾಡಿದವರ ವಿರುದ್ಧ ಯಾವುದೇ ನಿರ್ಭೀತಿಯಿಲ್ಲದೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಶಿಕ್ಷಣ ಇಲಾಖೆಯು ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿರುವುದು ಸರಿಯಲ್ಲ. ಮನುವಾದಿ ಶಕ್ತಿಗಳು ಸಂವಿಧಾನದ ಕುರಿತು ತಿಳಿವಳಿಕೆ ಮೂಡಿಸುವ ನೆಪದಲ್ಲಿ ಹುನ್ನಾರ ನಡೆಸುತ್ತಿವೆ. ಆದರೆ, ಇಡೀ ವಿಶ್ವಕ್ಕೆ ಗೊತ್ತಿದೆ ಅಂಬೇಡ್ಕರ್‌ ಅವರೇ ಭಾರತದ ಸಂವಿಧಾನದ ರಚನಾಕಾರರು’ ಎಂದು ಹೇಳಿದ್ದಾರೆ.

ADVERTISEMENT

‘ಸಾರ್ವಜನಿಕ ಶಿಕ್ಷಣ ಇಲಾಖೆಯು ಅ. 28ರಂದು ಸುತ್ತೋಲೆ ಹೊರಡಿಸಿ ಸಂವಿಧಾನ ದಿನಾಚರಣೆಯ ಅಂಗವಾಗಿ ಸಂವಿಧಾನದ ಕುರಿತು ಶಾಲಾ ಮಕ್ಕಳಿಗೆ 48 ಪುಟಗಳ ಕಿರು ಪುಸ್ತಕ ಕೊಡುವಂತೆ ತಿಳಿಸಿತ್ತು. ಅದರಲ್ಲಿ ಅಂಬೇಡ್ಕರ್‌ ಸಂವಿಧಾನ ರಚಿಸಿಲ್ಲ. ಕೇವಲ ಕರಡು ಸಮಿತಿ ಅಧ್ಯಕ್ಷರಾಗಿದ್ದರು. ಎಲ್ಲಾ ಸದಸ್ಯರು ಬರೆದಿರುವುದನ್ನು ಅಂಬೇಡ್ಕರ್‌ ಪರಿಶೀಲಿಸಿ ಒಪ್ಪಿಗೆ ಸೂಚಿಸಿರುತ್ತಾರೆ. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ ಅವರ ಪಾತ್ರ ಬೆರಳೆಣಿಕೆಯಷ್ಟಿದೆ ಎಂದು ಪ್ರಸ್ತಾಪಿಸಿ ಅವರಿಗೆ ಅವಮಾನ ಮಾಡಲಾಗಿತ್ತು. ಇದು ಖಂಡನಾರ್ಹ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಹಕ್ಕೊತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.