
ತೆಕ್ಕಲಕೋಟೆ: ತುಂಗಭದ್ರಾ ನದಿಪಾತ್ರದ ಜಿಲ್ಲೆಗಳಲ್ಲಿ ಎರಡನೇ (ಬೇಸಿಗೆ) ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ಹೊಸಪೇಟೆವರೆಗಿನ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು.
‘ತುಂಗಭದ್ರಾ ಜಲಾಶಯದ ನಾಲ್ಕು ಜಿಲ್ಲೆಗಳಿಗೆ ಎರಡನೇ ಬೆಳೆಗೆ ನೀರು ಬಿಡದಂತೆ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕುತಂತ್ರ ನಡೆಸಿದ್ದಾರೆ’ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಕರೂರು ಆರ್. ಮಾಧವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
‘ಜಲಾಶಯದಲ್ಲಿ 65 ಟಿಎಂಸಿ ಅಡಿ ನೀರು ಇದ್ದಾಗ ಎರಡನೇ ಬೆಳೆಗೆ ನೀರು ಒದಗಿಸಲಾಗಿದೆ. ಆದರೆ ಈಗ 79 ಟಿಎಂಸಿ ಅಡಿ ನೀರು ಇದ್ದಾಗಲೂ ನೀರು ಬಿಡುವುದಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.
‘ಎಲ್ಲ 33 ಗೇಟ್‌ಗಳನ್ನು ಬದಲಾಯಿಸಲಾಗುತ್ತಿದೆ. ಆದರೆ ಕೇವಲ 14 ಗೇಟ್ ಸಿದ್ಧಗೊಂಡಿವೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ರಾಮಕೃಷ್ಣಾರೆಡ್ಡಿ ಹೇಳುತ್ತಾರೆ. ಉಳಿದವು ಯಾವಾಗ ಸಿದ್ಧಗೊಳ್ಳುತ್ತವೆ ಎಂಬ ಮಾಹಿತಿ ಇಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.
ಪಾದಯಾತ್ರೆಯು ಕರೂರು ದರೂರು ದರೂರು ಕ್ಯಾಂಪ್ ಸಿರಿಗೇರಿ ಕ್ರಾಸ್ ಶಾನವಾಸಪುರ ಕುರುಗೋಡು ಕಂಪ್ಲಿ ಮೂಲಕ ಸಾಗಿ ನ.17ಕ್ಕೆ ತುಂಗಭದ್ರಾ ಜಲಾಶಯದ ಎದುರು ಸಮಾವೇಶಗೊಳ್ಳಲಿದೆ. ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ.ಆರ್. ಮಾಧವ ರೆಡ್ಡಿ, ರಾಜ್ಯ ರೈತಸಂಘದ ಅಧ್ಯಕ್ಷ
‘ತುಂಗಭದ್ರ ಅಣೆಕಟ್ಟೆಯ ಎಚ್.ಎಲ್.ಸಿ. ಭಾಗದಲ್ಲಿ ಸುಮಾರು 2 ಲಕ್ಷ ಎಕರೆ ಪ್ರದೇಶದಲ್ಲಿ ಒಣಮೆಣಸಿನಕಾಯಿ, ಜೋಳ, ತೊಗರಿ, ಹತ್ತಿ ಫಸಲು ಇರುವುದರಿಂದ ಡಿಸೆಂಬರ್‌ವರೆಗೆ ಮುಂಗಾರು ಬೆಳೆಗೆ ನೀರು ಉಣಿಸಬೇಕು. ಜತೆಗೆ ಹಿಂಗಾರು ಅವಧಿಯಲ್ಲಿ ಎಚ್ಎಲ್‌ಸಿ (ಮೇಲ್ಮಟ್ಟದ ಕಾಲುವೆ) ಮತ್ತು ಎಲ್ಎಲ್‌ಸಿ (ಕೆಳಮಟ್ಟದ) ಕಾಲುವೆಗೆ 5 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗುವ ಭತ್ತಕ್ಕೆ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ ನೀರು ಬಿಡಬೇಕು. ಎಲ್ಲ ಗೇಟ್‌ಗಳನ್ನು ಮುಂದಿನ ಜೂನ್ ವೇಳೆಗೆ ಅಳವಡಿಸಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ಸ್ವಾಮಿ ಸುರೇಂದ್ರ, ಓಂಕಾರಿಗೌಡ, ವಿಶ್ವನಾಥ ನಾಗಲೀಕರ, ಲೇಪಾಕ್ಷಿ ಅಸುಂಡಿ, ಬಸವರೆಡ್ಡಿ, ದೊಡ್ಡನಗೌಡ, ವಿರುಪಾಕ್ಷಿ, ಗಣೇಶ್ ಸ್ವಾಮಿ ವಿವಿಧ ಗ್ರಾಮಗಳ ರೈತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.