ADVERTISEMENT

ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದೊಡ್ಡ ಗಂಡಾಂತರ: ಪ್ರಶಾಂತ್‌ ಭೂಷಣ್‌

ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನದ ಸಮಾರೋಪದಲ್ಲಿ ಸುಪ್ರೀಂಕೋರ್ಟಿನ ಹಿರಿಯ ವಕೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 15:26 IST
Last Updated 1 ಸೆಪ್ಟೆಂಬರ್ 2018, 15:26 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಸಮಾಜಶಾಸ್ತ್ರ ಸಮ್ಮೇಳನದ ಸಮಾರೋಪ ಉದ್ದೇಶಿಸಿ ಸುಪ್ರೀಂಕೋರ್ಟಿನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಸಮಾಜಶಾಸ್ತ್ರ ಸಮ್ಮೇಳನದ ಸಮಾರೋಪ ಉದ್ದೇಶಿಸಿ ಸುಪ್ರೀಂಕೋರ್ಟಿನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ 12ನೇ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನಕ್ಕೆ ಶನಿವಾರ ಸಂಜೆ ತೆರೆ ಬಿತ್ತು.

‘ಸಾಮಾಜಿಕ ಸ್ಥಿತ್ಯಂತರ: ಸವಾಲುಗಳು ಮತ್ತು ಸಾಧ್ಯತೆಗಳು’, ‘ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬುಡಕಟ್ಟು, ಗ್ರಾಮೀಣ ಮತ್ತು ನಗರ ಸಮಾಜದಲ್ಲಿನ ಸ್ಥಿತ್ಯಂತರಗಳು’ ಸೇರಿದಂತೆ ಒಟ್ಟು 327 ವಿಷಯಗಳ ಕುರಿತು ಸಮಾಜಶಾಸ್ತ್ರಜ್ಞರು ಪ್ರಬಂಧ ಮಂಡಿಸಿದರು.

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸುಪ್ರೀಂಕೋರ್ಟಿನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ‘ದೇಶದ ಪರಿಸರ, ಸಮಾಜ, ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ದೊಡ್ಡ ಗಂಡಾಂತರ ಬಂದಿದೆ. ಅವುಗಳು ಉಳಿಯದಿದ್ದರೆ ಮನುಕುಲವೂ ಉಳಿಯುವುದಿಲ್ಲ. ಇದರ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಯೋಚನೆ ಮಾಡಿ, ಅವುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಮುಖ್ಯ ಕೆಲಸ ನಿರ್ವಹಿಸುವ ಮಾಧ್ಯಮಗಳನ್ನೇ ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಯಾವ ಮಾಧ್ಯಮ ಸಂಸ್ಥೆಗಳು ಕೇಂದ್ರದ ಅಣತಿಯಂತೆ ಕೆಲಸ ನಿರ್ವಹಿಸುವುದಿಲ್ಲವೋ ಅವುಗಳ ಪರವಾನಗಿ ರದ್ದುಪಡಿಸುವ ಭಯ ಮೂಡಿಸಲಾಗುತ್ತಿದೆ. ಎಲ್ಲ ರೀತಿಯ ತಂತ್ರಗಳನ್ನು ಬಳಸಿಕೊಂಡು ಮಾಧ್ಯಮಗಳ ಮೂಲಕ ಸಮಾಜದಲ್ಲಿ ಸುಳ್ಳು ಬಿತ್ತಲಾಗುತ್ತಿದೆ’ ಎಂದರು.

‘ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದ ಕೇಂದ್ರ ಚುನಾವಣಾ ಆಯೋಗವು ಪಕ್ಷಪಾತಿಯಾಗಿದೆ. ಸುಪ್ರೀಂಕೋರ್ಟಿನ ನ್ಯಾಯಾಧೀಶರ ಕೊಲಿಜಿಯಂ ಮೂಲಕ ನ್ಯಾಯಮೂರ್ತಿಗಳನ್ನು ನೇಮಿಸುವುದರ ಬದಲು ಹೊಸ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ. ಅತಿ ದೊಡ್ಡ ಹೋರಾಟದ ನಂತರವೂ ಲೋಕಪಾಲರನ್ನು ಸರ್ಕಾರ ನೇಮಕ ಮಾಡಿಲ್ಲ. ಕೇಂದ್ರ ವಿಚಕ್ಷಣಾ ದಳಕ್ಕೆ ಭ್ರಷ್ಟರನ್ನು ನೇಮಕ ಮಾಡಿ, ಅದನ್ನು ಕುಲಗೆಡಿಸಿದೆ. ಕೇಂದ್ರ ಮಾನವ ಹಕ್ಕುಗಳ ಆಯೋಗವನ್ನು ಇದೇ ರೀತಿ ಹಾಳು ಮಾಡಿದೆ’ ಎಂದು ಆರೋಪಿಸಿದರು.

‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದ್ದು, ಕೇಂದ್ರದ ಅನುಮತಿಯಿಲ್ಲದೇ ಯಾವುದೇ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ. ಈಗ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಜೆ.ಎನ್‌.ಯು. ಮೇಲೆ ಕೇಂದ್ರದ ಕಣ್ಣು ಬಿದ್ದಿದ್ದು, ಅದನ್ನು ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ. ಕೇಸರೀಕರಣ, ಅಂಧ್ರಶ್ರದ್ಧೆಯನ್ನು ವ್ಯವಸ್ಥಿತವಾಗಿ ಬಿತ್ತುವ ಸಂಚು ರೂಪಿಸಲಾಗುತ್ತಿದೆ. ಸ್ವತಃ ಪ್ರಧಾನಿಯೇ ಅದಕ್ಕೆಲ್ಲ ಕುಮ್ಮಕ್ಕು ಕೊಡುತ್ತಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮಾತನಾಡಿ, ‘ಲಿಂಗ ಸಂಬಂಧಿ ವೈರುಧ್ಯಗಳನ್ನು ಮೀರಿ ಸಮಾಜಶಾಸ್ತ್ರ ಬೆಳೆಯಬೇಕು. ಆಗ ಅದು ಪರಿಪೂರ್ಣ ಅನಿಸಿಕೊಳ್ಳುತ್ತದೆ’ ಎಂದು ಹೇಳಿದರು.

ಕರ್ನಾಟಕ ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ.ಸಿ.ಎ. ಸೋಮಶೇಖರಪ್ಪ, ಕಾರ್ಯದರ್ಶಿ ಜಿ.ಡಿ. ನಾರಾಯಣ, ಕುಲಸಚಿವ ಪಿ. ಮಹದೇವಯ್ಯ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಕೆ.ಎಂ. ಮೇತ್ರಿ, ಎಚ್‌.ಡಿ. ಪ್ರಶಾಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.