ಬಳ್ಳಾರಿ: ‘ನೀರು ತುಂಬಿಡುವ ಪರಿಕರಗಳಿಗೆ ಮುಚ್ಚಳ ಮುಚ್ಚಿ ಅಥವಾ ಬಟ್ಟೆ ಹೊದಿಸುವ ಮೂಲಕ ಡೆಂಗಿ ಹರಡುವುದನ್ನು ತಡೆಯಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶಬಾಬು ಹೇಳಿದರು.
ಈಡಿಸ್ ಸೊಳ್ಳೆಯ ಲಾರ್ವಾ ನಿರ್ಮೂಲನಾ ದಿನದ ಅಂಗವಾಗಿ ಶುಕ್ರವಾರ ನಗರದ ಮರಿಸ್ವಾಮಿ ಮಠದ ಬಡಾವಣೆಯಲ್ಲಿ ಮನೆ, ಶಾಲೆ, ಅಂಗನವಾಡಿಗಳು, ವಾಣಿಜ್ಯ ಮಳಿಗೆಗಳಲ್ಲಿನ ನೀರು ಸಂಗ್ರಹಕಗಳನ್ನು ಪರಿಶೀಲಿಸಿ ಮಾತನಾಡಿದರು.
‘ಇಲ್ಲಿನ ಜನರು ಡ್ರಮ್‌ಗಳಿಗೆ ಬಟ್ಟೆ ಕಟ್ಟುವ ರೂಢಿ ಆರಂಭಿಸಿರುವುದು ಎಲ್ಲರಿಗೂ ಮಾದರಿಯಾಗಲಿದೆ. ನೀರು ಸಂಗ್ರಹಕಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾ ವಹಿಸಬೇಕು’ ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾ ಅಧಿಕಾರಿ ಡಾ.ಆರ್. ಅಬ್ದುಲ್ಲಾ ಮಾತನಾಡಿ, ‘ಡೆಂಗಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗದ ಲಕ್ಷಣಗಳನ್ನಾಧರಿಸಿ ಚಿಕಿತ್ಸೆ ನೀಡಲಾಗುವುದು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಇದೆ. ಜ್ವರ ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ’ ಎಂದರು.
ಆರೋಗ್ಯ ಸಿಬ್ಬಂದಿ ಮರಿಬಸಗೌಡ, ಬಾಬುರಾವ್, ಶಕುಂತಲಾ ಮ್ಯಾಳಿ, ನಂದಿನಿ, ಅಂಬುಜಾ, ನಾಗರಾಜ, ಮಾಹಾಂಕಾಳಿ, ಸುಧಾ, ಹನುಮಂತಮ್ಮ, ಪುಷ್ಪಲತಾ, ಮಂಜಮ್ಮ, ಬಸವರಾಜ, ಸೋಮಶೇಖರ, ಗಂಗಾಧರ, ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.