
ಬಳ್ಳಾರಿ: ಆದಿಮಾನವರು ನೆಲೆಸಿದ್ದರು ಎನ್ನಲಾದ, ಸಂಡೂರು ತಾಲ್ಲೂಕಿನ ರಣಜಿತ್‌ಪುರ ಸಮೀಪದ ಗುಹೆಗೆ ಬಳ್ಳಾರಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಮತ್ತು ಸಂಶೋಧಕ ರವಿ ಕೋರಿಶೆಟ್ಟರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇವರ ಜತೆಗೆ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್ ಸುಮೇರ್, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ್, ಪರಿಸರ ತಜ್ಞ ಸಮದ್ ಕೊಟ್ಟೂರು, ತಹಶೀಲ್ದಾರ್ ಅನಿಲ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳೂ ಇದ್ದರು.
ಗುಹೆಯಲ್ಲಿ ಲಭ್ಯವಾಗುತ್ತಿರುವ ಆದಿಮಾನವರ ಪಳೆಯುಳಿಕೆ, ಪರಿಕರಗಳ ಕಾರ್ಬನ್ ಡೇಟಿಂಗ್ ನಡೆಸಲು ಉದ್ದೇಶಿಸಿರುವ ಪ್ರೊ.ರವಿ ಕೋರಿಶೆಟ್ಟರ್ ಅವರು ತಮ್ಮ ತಂಡದೊಂದಿಗೆ ಬಂದಿದ್ದರು ಎನ್ನಲಾಗಿದ್ದು, ಇವರಿಗೆ ಜಿಲ್ಲಾಡಳಿತವೂ ಜತೆಯಾಗಿದೆ.
ಗುಹೆಗೆ ಭೇಟಿ ನೀಡಿದಾಗ ಅಲ್ಲಿ ಬಿಳಿ ಸ್ಫಟಿಕ ಶಿಲೆ, ಬೂದಿ, ಸೂಕ್ಷ್ಮ ಶಿಲಾಯುಗ, ನವಶಿಲಾಯುಗಕ್ಕೆ ಸೇರಿದ ಪರಿಕರಗಳು, ಮಾನವ, ಪ್ರಾಣಿಯ ಮೂಳೆಗಳು ಗೋಚರಿಸಿದವು ಎಂದು ಹೇಳಲಾಗಿದೆ. ಕೋರಿಶೆಟ್ಟರ್ ಅವರ ತಂಡ ಇದರ ಮಾದರಿಗಳನ್ನು ಸಂಗ್ರಹಿಸಿದೆ ಎನ್ನಲಾಗಿದ್ದು, ಅಧ್ಯಯನಕ್ಕಾಗಿ ಅಹಮದಾಬಾದ್‌ಗೆ ಕಳುಹಿಸುವ ಸಾಧ್ಯತೆಗಳಿವೆ.
ಭೇಟಿ ಕುರಿತು ‘ಪ್ರಜಾವಾಣಿ’ ಜತೆಗೆ ಮಾತನಾಡಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ‘ಬಳ್ಳಾರಿಯೂ ಸೇರಿದಂತೆ ಅದರ ಸುತ್ತಮುತ್ತಲ ಜಿಲ್ಲೆಗಳಲ್ಲಿ ಆದಿ ಮಾನವರ ನೆಲೆಗಳಿವೆ. ಅವುಗಳ ರಕ್ಷಣೆ ಆಗಬೇಕಾಗಿದೆ. ಸಂಡೂರು ಗುಹೆ ಭೇಟಿಯು ಅತ್ಯಂತ ವಿಶೇಷವಾಗಿತ್ತು. ಅಲ್ಲಿ ಇನ್ನೂ ಅಧ್ಯಯನಗಳು ನಡೆಯಬೇಕಾಗಿದೆ’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ, ‘ಗುಹೆ ಇರುವ ಪ್ರದೇಶವನ್ನು ಸಂರಕ್ಷಿತ ತಾಣವಾಗಿ ಮಾಡುವ ಚಿಂತನೆ ಜಿಲ್ಲಾಡಳಿತಕ್ಕೆ ಇದೆ. ಇಂಥ ನೆಲೆಗಳ ಸಂರಕ್ಷಣೆ ಇಂದಿನ ಅಗತ್ಯ ಕೂಡ. ಜನರಿಗೆ ಇಂಥ ವಿಷಯಗಳ ಬಗ್ಗೆ ಜಾಗೃತಿ ಮೂಡಬೇಕು’ ಎಂದು ಹೇಳಿದರು.
ಕೋರಿಶೆಟ್ಟರ್ ತಂಡ ಗುಹೆಯಲ್ಲಿ ಮಾದರಿಗಳನ್ನು ಸಂಗ್ರಹಿಸಿದೆ. ಅವುಗಳ ಅಧ್ಯಯನದಲ್ಲಿ ಮಹತ್ವದ ಸಂಗತಿಗಳು ಸಿಕ್ಕರೆ ಗುಹೆಯ ಸುತ್ತಲಿನ ಪ್ರದೇಶವನ್ನು ಸಂರಕ್ಷಿಸಲು ಖಚಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು– ನಾಗೇಂದ್ರ ಪ್ರಸಾದ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.