
ಸಂಡೂರು: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ ದೇವದಾರಿ ಗಣಿಗೆಯ ಜಂಟಿ ಸರ್ವೆ ಕಾರ್ಯ ವಿರೋಧಿಸಿ ಜನಸಂಗ್ರಾಮ ಪರಿಷತ್, ಗಣಿಬಾಧಿತ ಪರಿಸರ ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಸಂಡೂರಿನ ನರಸಿಂಗಾಪುರ ಬಳಿ ತೀವ್ರ ಪ್ರತಿಭಟನೆ ನಡೆಸಿದವು.
ನರಸಿಂಗಾಪುರ, ರಣಜಿತ್‌ಪುರ, ನಾರಾಯಣಪುರ, ಭುಜಂಗನಗರ, ಯಶವಂತನಗರ, ಸೇರಿದಂತೆ ಸುತ್ತಲಿನಲ್ಲಿ ಗ್ರಾಮಗಳ ಮಹಿಳೆಯರು, ರೈತರು ಸೇರಿದಂತೆ ಐನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
‘ಪಶ್ಚಿಮ ಘಟ್ಟದಂತೆ ವೈವಿಧ್ಯತೆಯನ್ನು ಹೊಂದಿರುವ ಈ ಬೆಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದು ಪರಿಸರ ವಿರೋಧಿ ನಡೆಯಾಗಲಿದೆ’ ಎಂದು ಹೋರಾಟಗಾರರು ಎಚ್ಚರಿಸಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಮತ್ತು ಸರ್ವೆ ಇಲಾಖೆಗಳು ಜಂಟಿ ಸರ್ವೆ ನಿಲ್ಲಿಸಿದವು.
ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಕೆ.ಆರ್.ಎಸ್ ಸಮಿತಿ, ಎಸ್‌ಯುಸಿಐ(ಸಿ), ಜನಾಂದೋಲನ ಮಹಾಮೈತ್ರಿ, ಚಾಗನೂರು ಸಿರಿವಾರ ಭೂ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ದಲಿತ ಸೇನೆ, ಎಕೆಕೆಎಸ್, ಎಐಕೆಕೆಎಂಸ್, ಕಣಿವೆಹಳ್ಳಿ ಸಂರಕ್ಷಣಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು.
ರೈತ ಮುಖಂಡ, ವಕೀಲ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕರೂರ ಮಾಧವ ರೆಡ್ಡಿ, ಟಿ.ಎಂ ಶಿವಕುಮಾರ್, ಶ್ರೀಶೈಲ ಆಲದಳ್ಳಿ, ಎಂ.ಎಲ್.ಕೆ.ನಾಯ್ಡು, ಕೆ.ಬಿ ಮೌನೇಶ್, ಜಿ.ಕೆ ನಾಗರಾಜ, ನೀಲಕಂಠ ದೇಸಾಯಿ, ಕಾಡಪ್ಪ, ಪರಮೇಶಿ, ಮಹಿಳಾ ಸಂಘಟನೆಯ ಡಿ.ನಾಲಗಲಕ್ಷ್ಮಿ, ರಾಮನಮಲೆ ಗಂಗಮ್ಮ, ಅಂಚಿಮನಮನೆ ಗೌರಮ್ಮ, ಚನ್ನಮ್ಮ, ಮುದುಕಲಪೆಂಟೆ ತಿಪ್ಪಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.