ADVERTISEMENT

ಗಣಿ ಗುತ್ತಿಗೆ 2 ವರ್ಷ ವಿಸ್ತರಣೆ: ದೇವದಾರಿಗೆ ಕೇಂದ್ರ ಸರ್ಕಾರದ ಜೀವದಾನ

ಆರ್. ಹರಿಶಂಕರ್
Published 2 ಜನವರಿ 2026, 2:19 IST
Last Updated 2 ಜನವರಿ 2026, 2:19 IST
<div class="paragraphs"><p>. ಗಣಿ ಗುತ್ತಿಗೆ</p></div>

. ಗಣಿ ಗುತ್ತಿಗೆ

   

ಬಳ್ಳಾರಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್‌) ‘ದೇವದಾರಿ’ ಗಣಿ ಗುತ್ತಿಗೆ ರದ್ದಾಗುವುದನ್ನು ತಡೆದಿರುವ ಕೇಂದ್ರ ಸರ್ಕಾರ, ಗುತ್ತಿಗೆಯನ್ನು ಎರಡು ವರ್ಷಗಳಿಗೆ ವಿಸ್ತರಿಸಿದೆ. 

ಸಂಡೂರಿನ ದಟ್ಟಅರಣ್ಯದ (ವರ್ಜಿನ್‌ ಫಾರೆಸ್ಟ್‌) 470.4 ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್‌ ‘ದೇವದಾರಿ’ ಹೆಸರಿನ ಗಣಿ ಗುತ್ತಿಗೆ ಪಡೆದಿದೆ. ಆದರೆ, ಈವರೆಗೆ ಗಣಿ ಕಾರ್ಯಾಚರಣೆಯನ್ನು ಕಂಪನಿ ಆರಂಭಿಸಿಲ್ಲ. ಹೀಗಾಗಿ ಕಾಯ್ದೆಯ ಸೆಕ್ಷನ್ 4ಎ(4)ರ ಪ್ರಕಾರ, ಗುತ್ತಿಗೆ ಅವಧಿ 2026ರ ಜ. 01ರಂದು ಅಂತ್ಯಗೊಳ್ಳಲಿತ್ತು. 

ADVERTISEMENT

ಆದರೆ, ಗುತ್ತಿಗೆಯ ಅವಧಿಯನ್ನು 2028ರ ಜನವರಿ 1ರ ವರೆಗೆ ವಿಸ್ತರಣೆ ಮಾಡಿ, 2025ರ ನವೆಂಬರ್ 27ರಂದು ಕೇಂದ್ರ ಸರ್ಕಾರ (ಗಣಿ ಸಚಿವಾಲಯ) ಆದೇಶ ಹೊರಡಿಸಿದೆ. ಗುತ್ತಿಗೆ ರದ್ದಾಗುವುದನ್ನು ತಡೆದಿದೆ. ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್‌) ಕಾಯ್ದೆ –1957ರ ಸೆಕ್ಷನ್ 20ಎ ಅಡಿಯಲ್ಲಿ ತನಗಿರುವ ಪರಮಾಧಿಕಾರ ಬಳಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. 

ನಿಯಂತ್ರಣಕ್ಕೆ ನಿಲುಕದ ಕಾರಣಗಳು: ದೇವದಾರಿ ಗಣಿ ಗುತ್ತಿಗೆಯ ಕರಾರನ್ನು 2023ರ ಜನವರಿ 2ರಂದು ಮಾಡಿಕೊಳ್ಳಲಾಗಿತ್ತು. ಎಂಎಂಡಿಆರ್‌ ಕಾನೂನಿನ ಪ್ರಕಾರ, 2025ರ ಜ.1ರ ಒಳಗಾಗಿ ಕೆಐಒಸಿಎಲ್‌ ಗಣಿಗಾರಿಕೆ ಆರಂಭಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ 2026ರ ಜ. 1ರ ವರೆಗೆ, ಒಂದು ವರ್ಷಕ್ಕೆ, ಒಂದು ಬಾರಿಗೆ ಮಾತ್ರ ಗಣಿ ಗುತ್ತಿಗೆ ವಿಸ್ತರಣೆ ಮಾಡಲಾಗಿತ್ತು. ಆದರೂ ಕಂಪನಿಗೆ ಈವರೆಗೆ ಉತ್ಪಾದನೆ ಆರಂಭಿಸಲು ಸಾಧ್ಯವಾಗಿಲ್ಲ.

ಇದರ ಬಗ್ಗೆ ಕೇಂದ್ರ ಗಣಿ ಸಚಿವಾಲಯಕ್ಕೆ ಸಮಜಾಯಿಷಿ ನೀಡಿರುವ ಕೇಂದ್ರ ಉಕ್ಕು ಸಚಿವಾಲಯ  ‘ತನ್ನ ನಿಯಂತ್ರಣಕ್ಕೆ ನಿಲುಕದ ಬೆಳವಣಿಗೆಗಳಿಂದ ಗಣಿಗಾರಿಕೆ ನಡೆಸಲು ಈವರೆಗೆ ಸಾಧ್ಯವಾಗಿಲ್ಲ’ ಎಂದು ಹೇಳಿಕೊಂಡಿದೆ.  

‘ಮರಗಳ ಎಣಿಕೆ, ಮರ ಕಡಿತಲೆ, ಅರಣ್ಯ ಭೂಮಿ ಪರಿವರ್ತನೆ ಮತ್ತು ರಸ್ತೆಗೆ ಸಂಬಂಧಿಸಿದ ಹಲವು ಅನುಮತಿಗಳು ರಾಜ್ಯ ಸರ್ಕಾರದಿಂದ ಸಿಕ್ಕಿಲ್ಲ. ಜತೆಗೆ, ಚಿಕ್ಕಮಗಳೂರಿನ ಕುದುರೆಮುಖದಲ್ಲಿನ ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ದೇವದಾರಿಯಲ್ಲಿ ಗಣಿಗಾರಿಕೆ ನಡೆಸಲು ಅಡ್ಡಿಯಾದವು’ ಎಂದು ಉಕ್ಕು ಸಚಿವಾಲಯ ಹೇಳಿಕೊಂಡಿದೆ.  

ಈ ಕಾರಣಗಳನ್ನು ಪರಿಗಣಿಸಿರುವ ಕೇಂದ್ರ ಗಣಿ ಇಲಾಖೆ, ಸಾರ್ವಜನಿಕ ವಲಯದ ಉದ್ದಿಮೆಯ ರಕ್ಷಣೆ, ಸಂಡೂರು–ಬಳ್ಳಾರಿ ಭಾಗದಲ್ಲಿ ಉದ್ಯೋಗ ಸೃಷ್ಟಿ, ರಾಜ್ಯ ಸರ್ಕಾರಕ್ಕೆ ಗಣಿಯಿಂದ  ಬರಬಹುದಾದ ರಾಯಧನವನ್ನು ಗಮನದಲ್ಲಿ ಇಟ್ಟುಕೊಂಡು ಕೆಐಒಸಿಎಲ್‌ನ ದೇವದಾರಿ ಗಣಿಯ ಗುತ್ತಿಗೆಯನ್ನು ಎರಡು ವರ್ಷ ವಿಸ್ತರಿಸಿದೆ.

ಭಾರತದ್ದು ಒಕ್ಕೂಟ ವ್ಯವಸ್ಥೆ. ರಾಜ್ಯಗಳಿಗಿರುವ ಅಧಿಕಾರವನ್ನು ಕೇಂದ್ರ ಮೊಟಕು ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಏಕಾಏಕಿ ಗಣಿ ಗುತ್ತಿಗೆಯನ್ನು ವಿಸ್ತರಣೆ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ. . 
– ಎಸ್‌.ಆರ್‌ ಹಿರೇಮಠ ಸಮಾಜ ಪರಿವರ್ತನಾ ಸಮುದಾಯದ ಮುಖಂಡರು

99 ಸಾವಿರ ಮರಗಳಿಗೆ ಆಪತ್ತು

ದೇವದಾರಿ ಗಣಿಗಾರಿಕೆಗೆ ಮಂಜೂರಾಗಿರುವ 470.4 ಹೆಕ್ಟೇರ್ ದಟ್ಟಾರಣ್ಯ. ಹಲವು ಬಗೆಯ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಝರಿ ಜಲಾಪಾತಗಳು ಇಲ್ಲಿವೆ. ಗಣಿಗಾರಿಕೆ‌ಗಾಗಿ 99 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ. ಇದು ಸ್ಥಳೀಯ ಪ್ರಾಕೃತಿಕ ವಿನಾಶಕ್ಕೆ ಕಾರಣವಾಗಲಿದೆ ಎಂದು ಅರಣ್ಯ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ. ಈ ವಿಷಯವು ವಿರೋಧಗಳಿಗೆ ಕಾರಣವಾಗಿದೆ.

ಕೇಂದ್ರದ ಆದೇಶಕ್ಕಿದೆಯೇ ಮಾನ್ಯತೆ?

 ಎಂಎಂಡಿಆರ್‌ ಕಾಯಿದೆಯ ಸೆಕ್ಷನ್‌ 20 (ಎ) ಅಡಿಯಲ್ಲಿ ತನಗಿರುವ ಅಧಿಕಾರ ಬಳಸಿ ದೇವದಾರಿ ಗಣಿ ಗುತ್ತಿಗೆ ಅವಧಿ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ ಸೆಕ್ಷನ್‌ 20 (ಎ) ಹೇಳುವುದೇ ಬೇರೆ.   ‘ಖನಿಜ ಸಂಪನ್ಮೂಲಗಳ ಸಂರಕ್ಷಣೆ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ನೀತಿ ಖನಿಜ ಸಂಪನ್ಮೂಲಗಳ ವೈಜ್ಞಾನಿಕ ಮತ್ತು ಸುಸ್ಥಿರ ಅಭಿವೃದ್ಧಿ ಮತ್ತು ಉತ್ಖನನಕ್ಕಾಗಿ ಅಗತ್ಯವಿರುವ ನಿರ್ದೇಶನಗಳನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬಹುದು’ ಎಂದು ಸೆಕ್ಷನ್‌ 20(ಎ) ಹೇಳಿದೆ. ಆದರೆ ಗಣಿಯೊಂದರ ಗುತ್ತಿಗೆ ವಿಸ್ತರಿಸಬಹುದು ಎಂದು ಹೇಳಿಲ್ಲ. ಸದ್ಯ ಗುತ್ತಿಗೆ ವಿಸ್ತರಿಸಿರುವುದನ್ನು ನಿರ್ದೇಶನ ಎಂದು ಪರಿಗಣಿಸಿದರೂ ಇಲ್ಲಿ ಮತ್ತೆ ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮವಾ ಗಲಿದೆ ಎಂದು ಹೇಳಲಾಗುತ್ತಿದೆ.  ಈ ಕುರಿತು ಪ್ರತಿಕ್ರಿಯೆ ಪಡೆಯಲು ವಾಣಿಜ್ಯ ಮತ್ತು ಕೈಗಾರಿಕಾ (ಗಣಿ) ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ಸಂಪರ್ಕಿಸಲಾಯಿತಾದರೂ ಸಾಧ್ಯವಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.