ADVERTISEMENT

ಹೊಸಪೇಟೆ| ಮಾಜಿ ದೇವದಾಸಿಯರಿಗೆ ‘ವಿಜಯ ವನಿತೆ’

ಪುನರ್ವಸತಿ ಕಲ್ಪಿತ ದೇವದಾಸಿಯರ ಸಮಸ್ಯೆ ಆಲಿಸಲು ವೇದಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 8:31 IST
Last Updated 23 ಫೆಬ್ರುವರಿ 2023, 8:31 IST
ಮಿಷನ್‌ ‘ವಿಜಯ ವನಿತೆ’ ಯೋಜನೆಯ ಅಡಿಯಲ್ಲಿ ಆರಂಭಿಸಲಾಗಿರುವ ವಿಜಯನಗರ ಜಿಲ್ಲಾ ದೇವದಾಸಿ ಹೆಲ್ಪ್‌ಡೆಸ್ಕ್‌ ಅನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಗುರುವಾರ ಹೊಸಪೇಟೆಯಲ್ಲಿ ಉದ್ಘಾಟಿಸಿದರು
ಮಿಷನ್‌ ‘ವಿಜಯ ವನಿತೆ’ ಯೋಜನೆಯ ಅಡಿಯಲ್ಲಿ ಆರಂಭಿಸಲಾಗಿರುವ ವಿಜಯನಗರ ಜಿಲ್ಲಾ ದೇವದಾಸಿ ಹೆಲ್ಪ್‌ಡೆಸ್ಕ್‌ ಅನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಗುರುವಾರ ಹೊಸಪೇಟೆಯಲ್ಲಿ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ಮಿಷನ್‌ ‘ವಿಜಯ ವನಿತೆ’ ಯೋಜನೆಯ ಅಡಿಯಲ್ಲಿ ವಿಜಯನಗರ ಜಿಲ್ಲಾ ದೇವದಾಸಿ ಹೆಲ್ಪ್‌ಡೆಸ್ಕ್‌ ಉದ್ಘಾಟನಾ ಸಮಾರಂಭ ಗುರುವಾರ ನಗರದಲ್ಲಿ ಜರುಗಿತು.

ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಅವರು ಸಹಾಯವಾಣಿ ಉದ್ಘಾಟಿಸಿ, ಇಡೀ ರಾಜ್ಯದಲ್ಲಿ ಅಂದಾಜು 46 ಸಾವಿರ ಜನ ಪುನರ್ವಸತಿ ಕಲ್ಪಿತ ದೇವದಾಸಿಯರು ಇರುವುದು ಗೊತ್ತಾಗಿದೆ. ಇದರಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 9 ಸಾವಿರ ಜನರಿದ್ದರೆ, ವಿಜಯನಗರ ಜಿಲ್ಲೆಯೊಂದರಲ್ಲೇ 7 ಸಾವಿರಕ್ಕೂ ಅಧಿಕ ಜನರಿದ್ದಾರೆ. ಆದರೆ, ಈ ಸಂಖ್ಯೆ ನಿರ್ದಿಷ್ಟವಾಗಿಲ್ಲ. ಇನ್ನೂ ಸರ್ವೇ ನಡೆಯುತ್ತಿದೆ. ಅನೇಕರು ಹಿಂಜರಿಕೆ, ಕೀಳರಿಮೆಯಿಂದ ಹೆಸರು ನೋಂದಣಿ ಮಾಡಿಸಿಕೊಂಡಿಲ್ಲ. ಹಿಂಜರಿಕೆ ಇರುವವರನ್ನು ಗಮನದಲ್ಲಿ ಇಟ್ಟುಕೊಂಡು ಈ ಸಹಾಯವಾಣಿ ಆರಂಭಿಸಲಾಗಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಪಿ. ಅವರು ಈ ಯೋಜನೆ ರೂಪಿಸಿದ್ದರು. ಅದಕ್ಕಾಗಿ ಖನಿಜ ನಿಧಿ ಬಳಸಲು ತೀರ್ಮಾನಿಸಲಾಗಿತ್ತು. ‘ಸಖಿ’ ಟ್ರಸ್ಟ್‌ ಅನ್ನು ಅಧಿಕೃತ ಏಜೆನ್ಸಿ ಮಾಡಿಕೊಂಡು ಕೆಲಸ ಆರಂಭಿಸಲಾಗಿದೆ. 15 ವರ್ಷಗಳಿಂದ ಈ ಟ್ರಸ್ಟ್‌ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಜಿಲ್ಲಾಡಳಿತ ಆರ್ಥಿಕ ನೆರವು ನೀಡಬಹುದು. ಆದರೆ, ತಳಮಟ್ಟದಲ್ಲಿ ಅದರ ಅನುಷ್ಠಾನ ಬಹಳ ಅಗತ್ಯ. ಏನೂ ಲಾಭ ಇಲ್ಲದೆ ಕೆಲಸ ಮಾಡುವ ಎನ್‌ಜಿಒಗಳು ಬಹಳ ಕಡಿಮೆ. ಅದರಲ್ಲಿ ‘ಸಖಿ’ ಟ್ರಸ್ಟ್‌ ಹಾಗಿಲ್ಲ ಎಂದು ತಿಳಿಸಿದರು.

ADVERTISEMENT

ದೇವದಾಸಿ ಪದ್ಧತಿಗೆ ಒಳಗಾದ ಅನೇಕ ಕುಟುಂಬಗಳಿವೆ. ಅದರಿಂದ ಅನೇಕ ಮಹಿಳೆಯರು, ಮಕ್ಕಳು ಸಮಸ್ಯೆಗೆ ಒಳಗಾಗಿದ್ದಾರೆ. ಅವರನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿಗೆ ತರುವುದು ಮುಖ್ಯ ಉದ್ದೇಶವಾಗಿದೆ. ಅನಂತರ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು. ಎಲ್ಲರೂ ಟ್ರಸ್ಟ್‌ ಕೆಲಸಕ್ಕೆ ಸ್ಪಂದಿಸಬೇಕು. ಜಿಲ್ಲಾಡಳಿತ ಬೆನ್ನೆಲುಬಾಗಿ ಕೆಲಸ ಮಾಡಲಿದೆ. ಆರ್ಥಿಕ ಸವಲತ್ತುಗಳನ್ನು ಒದಗಿಸಲಿದೆ. ಹೆಲ್ಪ್‌ಡೆಸ್ಕ್‌ ನಿರಂತರವಾಗಿ ಕೆಲಸ ನಿರ್ವಹಿಸಲಿದೆ. ಗಣಿಬಾಧಿತ ಪ್ರದೇಶ ಇರುವುದರಿಂದ ಜಿಲ್ಲಾ ಖನಿಜ ನಿಧಿಯಿಂದ ಸಹಾಯ ಧನ ಒದಗಿಸಲಾಗುತ್ತದೆ ಎಂದು ಹೇಳಿದರು.

ದೇವದಾಸಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಈಗ ರಾತ್ರೋರಾತ್ರಿ ಸಂಪೂರ್ಣ ನಿರ್ಮೂಲನೆ ಮಾಡಲು ಆಗುವುದಿಲ್ಲ. ಆದರೆ, ಹಂತ ಹಂತವಾಗಿ ಮಾಡಲು ಸಾಧ್ಯವಿದೆ. ಎಲ್ಲರೂ ಕೂಡಿಕೊಂಡು ಕೆಲಸ ಮಾಡಿದರೆ ಸಾಧಿಸಬಹುದು. ಖನಿಜ ನಿಧಿ ಬಳಸಿಕೊಂಡು ಪುನರ್ವಸತಿಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಹಿಂದೆ ಮೌಢ್ಯತೆ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಸಮಾಜದ ದೌರ್ಜನ್ಯ ಸೇರಿದಂತೆ ಇತರೆ ಕಾರಣಗಳಿಂದ ಅನೇಕರು ದೇವದಾಸಿ ಪದ್ಧತಿಗೆ ಒಳಗಾಗಿದ್ದರು. ಈಗ ಎಲ್ಲರಿಗೂ ಶಿಕ್ಷಣ, ಮಾಹಿತಿ ಹಾಗೂ ಅವಕಾಶಗಳಿವೆ. ಅದನ್ನು ಬಳಸಿಕೊಂಡು ಹೊರಬರಬೇಕು. ಮೌಢ್ಯ ದೂರ ಮಾಡಿ ಸಮಾಜದಲ್ಲಿ ಎಲ್ಲರನ್ನೂ ಮುಂದೆ ತರಲು ಪ್ರಯತ್ನಿಸಬೇಕು. ಧೈರ್ಯದಿಂದ ಮುಂದೆ ಬರಬೇಕು. ಕೌಟುಂಬಿಕ ಸಮಸ್ಯೆ ಹೇಳಿಕೊಂಡರೆ ನೆರವು ನೀಡಲಾಗುವುದು ಎಂದು ಹೇಳಿದರು.

‘ಸಖಿ’ ಟ್ರಸ್ಟ್‌ ನಿರ್ದೇಶಕಿ ಎಂ. ಭಾಗ್ಯಲಕ್ಷ್ಮಿ ಮಾತನಾಡಿ, 15 ದಿನಗಳ ಒಳಗೆ ಜಿಲ್ಲಾಡಳಿತದಿಂದ ಟೋಲ್‌ ಫ್ರಿ ದೂರವಾಣಿ ಸಂಖ್ಯೆ ಬಿಡುಗಡೆಗೊಳಿಸಲಾಗುವುದು. ಅದಕ್ಕೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಸಹ ಪ್ರಾಧ್ಯಾಪಕ ಚಂದ್ರಶೇಖರ್‌ ಆರ್‌.ವಿ., ದೇವದಾಸಿ ಹೆಲ್ಪ್‌ಡೆಸ್ಕ್‌ ಸಂಯೋಜಕ ಮಂಜುಳಾ ಮಾಳಗಿ, ಮಂಜುನಾಥ್‌, ರೂಪಾ, ಲಕ್ಷ್ಮಿದೇವಿ, ನಾಗಮ್ಮ, ಹುಲಿಗೆಮ್ಮ, ಅರುಣಾಲಕ್ಷ್ಮಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.