ADVERTISEMENT

PV Web Exclusive: ಅಭಿವೃದ್ಧಿ ಕಾಮಗಾರಿ ಹಂಪಿಗೆ ಮಾರಕವಾಯಿತೇ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಮಾರ್ಚ್ 2021, 12:27 IST
Last Updated 17 ಮಾರ್ಚ್ 2021, 12:27 IST
ಕುಸಿದು ಬಿದ್ದಿರುವ ಹಂಪಿ ಕೋಟೆ ಗೋಡೆ
ಕುಸಿದು ಬಿದ್ದಿರುವ ಹಂಪಿ ಕೋಟೆ ಗೋಡೆ   

ವಿಜಯನಗರ (ಹೊಸಪೇಟೆ): ವಿಶ್ವಪ್ರಸಿದ್ದ ಹಂಪಿಗೆ ಅಭಿವೃದ್ಧಿ ಕಾಮಗಾರಿಗಳು ಮಾರಕವಾಗುತ್ತಿವೆಯೇ? ಇತ್ತೀಚಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಂತಹವರಿಗೂ ಇದು ನಿಜ ಅನಿಸದೆ ಇರಲಾರದು.

ಸ್ಮಾರಕ ಪ್ರಿಯರ ವಿರೋಧದ ನಡುವೆಯೂ ಹಂಪಿ ಪರಿಸರದಲ್ಲಿ ಬೇಕಾಬಿಟ್ಟಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಟಿಕೆಟ್‌ ಕೌಂಟರ್‌, ಕ್ಯಾಂಟೀನ್‌, ಶೌಚಾಲಯದ ಹೆಸರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ನಿರ್ಬಂಧ ಇರುವ ಸ್ಮಾರಕಗಳಲ್ಲಿ ಅತಿ ಗಣ್ಯರಿಗೆ ಬೇಕಾಬಿಟ್ಟಿ ಓಡಾಡಲು ಅವಕಾಶ ಕಲ್ಪಿಸುವುದಲ್ಲದೇ ಅವರಿಗೆ ಮನಸೋ ಇಚ್ಛೆ ಛಾಯಾಗ್ರಹಣಕ್ಕೆ ಅನುಮತಿ ಕೊಡಲಾಗುತ್ತಿದೆ. ಈ ಎಲ್ಲವೂ ಪರೋಕ್ಷ, ಅಪರೋಕ್ಷವಾಗಿ ಸ್ಮಾರಕಗಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಇತ್ತೀಚೆಗೆ ಹಂಪಿಯ ಕಮಲ ಮಹಲ್‌ಗೆ ಹೊಂದಿಕೊಂಡಂತೆ ಇರುವ ವಿಜಯನಗರದ ಅರಸ ಅಳಿಯ ರಾಮರಾಯನ ಅರಮನೆ ಕೋಟೆ ಗೋಡೆಯ ಒಂದು ಭಾಗ ಏಕಾಏಕಿ ಕುಸಿದು ಬಿದ್ದಿದೆ. ‘ನೂರಾರು ವರ್ಷಗಳ ಹಳೆಯ ಗೋಡೆ ಮಳೆ, ಬಿಸಿಲಿಗೆ ಶಿಥಿಲಗೊಂಡು ಬಿದ್ದಿರುವ ಸಾಧ್ಯತೆ ಇದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತಿಳಿಸಿದೆ. ಗೋಡೆ ಕುಸಿಯಲು ಇದೂ ಕೂಡ ಒಂದು ಕಾರಣ ಇದ್ದಿರಬಹುದು.

ADVERTISEMENT
ಕೋಟೆ ಗೋಡೆ ಸಮೀಪ ಕೊಳವೆಬಾವಿ ಕೊರೆಸಿರುವುದು

ಆದರೆ, ಇದೇ ಪರಿಸರದಲ್ಲಿನ ಚಂದ್ರಶೇಖರ ದೇವಾಲಯದ ಬಳಿ ಇತ್ತೀಚಿಗಷ್ಟೇ ಕೊಳವೆಬಾವಿ ಕೊರೆಸಲಾಗಿತ್ತು. ಬಿದ್ದಿರುವ ಕೋಟೆ ಗೋಡೆ ಸಮೀಪವೇ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಾಹನಗಳಲ್ಲಿ ತಂದು ಹಾಕಲಾಗುತ್ತಿದೆ. ಇದು ಸಹ ಗೋಡೆ ಕುಸಿಯಲು ಕಾರಣ ಇರಬಹುದು ಎಂದು ಶಂಕಿಸಲಾಗಿದೆ.

ಕೆಲ ತಿಂಗಳ ಹಿಂದೆ ಕಮಲ ಮಹಲ್‌, ವಿಜಯ ವಿಠಲ ದೇವಸ್ಥಾನದ ಸಪ್ತಸ್ವರ ಮಂಟಪದಲ್ಲಿ ಬೇಕಾಬಿಟ್ಟಿ ಓಡಾಡಿ ವಿವಾಹಪೂರ್ವ ಫೋಟೋಶೂಟ್‌ ನಡೆಸಲಾಗಿದೆ. ಕೇಂದ್ರ ಮಾಹಿತಿ ಆಯುಕ್ತರು ಕುಟುಂಬ ಸದಸ್ಯರೊಂದಿಗೆ ಹಂಪಿ ಕಲ್ಲಿನ ರಥದ ಮುಂಭಾಗದಲ್ಲಿ ಕುಳಿತುಕೊಂಡು ಛಾಯಾಚಿತ್ರ ತೆಗೆಸಿಕೊಂಡಿದ್ದರು. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಕಲ್ಲಿನ ರಥದ ಮೇಲೆ ಕೈಯಿಟ್ಟು ಛಾಯಾಚಿತ್ರ ತೆಗೆಸಿಕೊಂಡಿದ್ದ ಚಿತ್ರ ಎಲ್ಲೆಡೆ ವೈರಲ್‌ ಆಗಿತ್ತು. ಪುರಾತತ್ವ ಇಲಾಖೆಯ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲೇ ಇದೆಲ್ಲ ನಡೆದಿದೆ. ಆದರೆ, ಅದನ್ನು ತಡೆಯುವ ಕೆಲಸ ಮಾಡಿಲ್ಲ. ಈ ಕಾರಣಕ್ಕಾಗಿಯೇ ಹಂಪಿಯಲ್ಲಿ ಜನಸಾಮಾನ್ಯರಿಗೊಂದು, ಅತಿ ಗಣ್ಯರಿಗೊಂದು ನಿಯಮ ಚಾಲ್ತಿಯಲ್ಲಿದೆ ಎನ್ನುವ ಆರೋಪವಿದೆ.

ಕೋಟೆ ಗೋಡೆ ಬಳಿ ನಿರ್ಮಿಸುತ್ತಿರುವ ಶೌಚಾಲಯ ಕಟ್ಟಡ

‘ಯುನೆಸ್ಕೊ ನಿಯಮದ ಪ್ರಕಾರ ಹಂಪಿಯ ಯಾವುದೇ ಸ್ಮಾರಕಗಳ ಪರಿಸರದಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಆದರೆ, ಪುರಾತತ್ವ ಇಲಾಖೆಯವರು ಮಾಡಬಾರದೆಲ್ಲ ಮಾಡುತ್ತಿದ್ದಾರೆ. ಹೀಗಾಗಿಯೇ ಸ್ಮಾರಕಗಳಿಗೆ ಧಕ್ಕೆ ಉಂಟಾಗುತ್ತಿದೆ. ಇವರ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಾಗಿಯೇ ಇತ್ತೀಚೆಗೆ ಕೋಟೆ ಗೋಡೆ ಕುಸಿದು ಬಿದ್ದಿದೆ’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ್‌ ಮಾಳಗಿ ಆರೋಪಿಸಿದರು.

ಆದರೆ, ಇದನ್ನು ಪಿ. ಕಾಳಿಮುತ್ತು ಅವರು ಒಪ್ಪುವುದಿಲ್ಲ. ‘ಕಟ್ಟಡ ನಿರ್ಮಾಣ ಕಾಮಗಾರಿ ಕೋಟೆ ಗೋಡೆಯಿಂದ ಬಹಳ ದೂರದಲ್ಲಿ ನಡೆಯುತ್ತಿದೆ. ಅದರಿಂದ ಈ ರೀತಿ ಆಗಿಲ್ಲ. ಕೋಟೆ ಗೋಡೆ ಬಹಳ ಪುರಾತನವಾದುದು. ಅದರ ಒಂದು ಭಾಗ ಸಡಿಲಗೊಂಡು ಬಿದ್ದಿರಬಹುದು. ಅದನ್ನು ಮೊದಲಿನಂತೆ ನಿರ್ಮಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.