ADVERTISEMENT

ದಿನೇಶ ಗುಂಡೂರಾವ್‌ಗೆ ಸಂಸ್ಕಾರ ಇಲ್ಲ: ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:33 IST
Last Updated 1 ಡಿಸೆಂಬರ್ 2019, 14:33 IST
ಸೋಮವಾರ ಸಂಜೆ ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಮತದಾರರ ಸಮಾವೇಶದ ಸಿದ್ಧತೆಯನ್ನು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದ ವೈ.ದೇವೇಂದ್ರಪ್ಪ ಅವರು ಭಾನುವಾರ ಸಂಜೆ ಪರಿಶೀಲನೆ ನಡೆಸಿದರು
ಸೋಮವಾರ ಸಂಜೆ ಹೊಸಪೇಟೆಯ ಮುನ್ಸಿಪಲ್‌ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಮತದಾರರ ಸಮಾವೇಶದ ಸಿದ್ಧತೆಯನ್ನು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದ ವೈ.ದೇವೇಂದ್ರಪ್ಪ ಅವರು ಭಾನುವಾರ ಸಂಜೆ ಪರಿಶೀಲನೆ ನಡೆಸಿದರು   

ಹೊಸಪೇಟೆ: ‘ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರನ್ನು ‘ನಮಕ್‌ ಹರಾಮ್‌’ ಎಂದಿರುವ ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ್‌ ಅವರಿಗೆ ಸಂಸ್ಕಾರ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಟೀಕಿಸಿದರು.

ಭಾನುವಾರ ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತಮ ನಾಲಿಗೆ, ಸಂಸ್ಕಾರ ಇದ್ದವರು ಬಾಯಿಗೆ ಬಂದಂತೆ ಮಾತನಾಡುವುದಿಲ್ಲ. ಆದರೆ, ದಿನೇಶ ಅವರಿಗೆ ಅವರೆಡೂ ಇಲ್ಲ. ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಆದರೆ, ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಉನ್ನತ ಸ್ಥಾನದಲ್ಲಿ ಇರುವವರು ಬಾಯಿ ಹರಿಬಿಡಬಾರದು’ ಎಂದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ದಿನೇಶ ಗುಂಡೂರಾವ್ ಅವರು ಮನಬಂದಂತೆ ಮಾತನಾಡುತ್ತಿರುವ ಕಾರಣದಿಂದಲೇ ಅವರ ಪಕ್ಷಕ್ಕೆ ಇಂದು ಈ ಸ್ಥಿತಿ ಬಂದಿದೆ. ಕಾಂಗ್ರೆಸ್‌ನಲ್ಲಿ ಇಕ್ಕಟ್ಟು ಇದ್ದರೆ, ಬಿಜೆಪಿಯಲ್ಲಿ ಒಗ್ಗಟ್ಟು ಇದೆ. ಕಾಂಗ್ರೆಸ್ಸಿನ ಒಬ್ಬೊಬ್ಬ ಮುಖಂಡರು ಒಂದೊಂದು ದಿಕ್ಕಿಗಿದ್ದಾರೆ. ಪರಸ್ಪರ ತಾಳಮೇಳ ಇಲ್ಲ’ ಎಂದು ಟೀಕಿಸಿದರು.

ADVERTISEMENT

‘ಸೋಮವಾರ (ಡಿ.2) ಸಂಜೆ ಐದು ಗಂಟೆಗೆ ನಗರದ ಮುನ್ಸಿಪಲ್‌ ಮೈದಾನದಲ್ಲಿ ಮತದಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. 25 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಂಸದರಾದ ತೇಜಸ್ವಿ ಸೂರ್ಯ, ವೈ.ದೇವೇಂದ್ರಪ್ಪ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ವಸತಿ ಸಚಿವ ವಿ. ಸೋಮಣ್ಣ ಭಾಗವಹಿಸುವರು. ಡಿ. 3,4ರಂದು ಮತದಾರರಿಗೆ ಚೀಟಿ ಕೊಡುವ ಎರಡನೇ ಹಂತದ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ’ ಎಂದು ಹೇಳಿದರು.

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ಆನಂದ್‌ ಸಿಂಗ್‌ ಅವರು ಚುನಾವಣೆಯಲ್ಲಿ ಗೆಲ್ಲುವುದು ಶತಃಸಿದ್ಧ. ನಂತರ ಅವರು ಮಂತ್ರಿಯಾಗುತ್ತಾರೆ. ಬಳಿಕ ನಾನು, ಅವರು ಸೇರಿಕೊಂಡು ಜೋಡೆತ್ತಿನಂತೆ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ಮಾಧ್ಯಮ ವಕ್ತಾರ ಶಂಕರ್‌ ಮೇಟಿ, ಮುಖಂಡ ಅಯ್ಯಾಳಿ ತಿಮ್ಮಪ್ಪ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.