ADVERTISEMENT

ಮೊಹರಂ: ಭಾವೈಕ್ಯತೆಗೆ ಸಾಕ್ಷಿಯಾದ ಬ್ಯಾಲಹುಣ್ಸಿ

ದಶಕಗಳಿಂದ ಹಿಂದುಗಳೇ ಆಚರಿಸಿಕೊಂಡು ಬಂದಿರುವ ಮೊಹರಂ

ಕೆ.ಸೋಮಶೇಖರ
Published 8 ಸೆಪ್ಟೆಂಬರ್ 2019, 19:45 IST
Last Updated 8 ಸೆಪ್ಟೆಂಬರ್ 2019, 19:45 IST
ಮೊಹರಂ ನಿಮಿತ್ತ ಬ್ಯಾಲಹುಣ್ಸಿಯಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಿರುವುದು
ಮೊಹರಂ ನಿಮಿತ್ತ ಬ್ಯಾಲಹುಣ್ಸಿಯಲ್ಲಿ ಪೀರಲ ದೇವರನ್ನು ಪ್ರತಿಷ್ಠಾಪಿಸಿರುವುದು   

ಹೂವಿನಹಡಗಲಿ: ಮೊಹರಂ ಆಚರಣೆಯನ್ನು ಇಡಿಯಾಗಿ ಹಿಂದೂಗಳೇ ಶ್ರದ್ಧಾ, ಭಕ್ತಿಯಿಂದ ಆಚರಿಸುವ ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಗ್ರಾಮದಲ್ಲಿ ಮಸೀದಿಯೂ ಇಲ್ಲ, ಮುಸ್ಲಿಂ ಕುಟುಂಬವೂ ಇಲ್ಲ. ಆದರೂ ಇಲ್ಲಿ ಮೊಹರಂ ಜರುಗುತ್ತದೆ. ಗ್ರಾಮದ ಎಲ್ಲ ಜಾತಿ, ವರ್ಗದವರುಒಗ್ಗಟ್ಟಿನಿಂದ ಐದು ದಿನ ಸಂಪ್ರದಾಯಬದ್ದವಾಗಿ ಮೊಹರಂ ಆಚರಿಸುತ್ತ ಬಂದಿದ್ದಾರೆ.

30 ವರ್ಷ ಹಿಂದೆ ಮೊಹರಂ ಸಂದರ್ಭದಲ್ಲೇ ಪೀರಲ ದೇವರುಗಳು ತುಂಗಭದ್ರಾ ನದಿಯಲ್ಲಿ ತೇಲಿ ಬಂದು ಗ್ರಾಮದ ದಡದಲ್ಲಿ ಸಿಕ್ಕಿದ್ದವಂತೆ. ಗ್ರಾಮದ ಹಿರಿಯರು ಚರ್ಚಿಸಿ, ಊರಲ್ಲಿ ಮುಸ್ಲಿಂ ಕುಟುಂಬಗಳು ಇಲ್ಲದ ಕಾರಣ ಪಕ್ಕದ ಮಕರಬ್ಬಿಯಿಂದ ಮುಜಾವರರನ್ನು ಕರೆಸಿ ಮೊಹರಂ ಆಚರಣೆಯನ್ನು ಪ್ರಾರಂಭಿಸಿದರಂತೆ. ಆ ಪರಂಪರೆ ಗ್ರಾಮದ ಜನರು ಇಂದಿಗೂ ಮುಂದುವರೆಸಿದ್ದಾರೆ.

ADVERTISEMENT

ವೀರಶೈವ ಲಿಂಗಾಯತರು ಬಹುಸಂಖ್ಯಾತರಿರುವ ಗ್ರಾಮದಲ್ಲಿ ಎಲ್ಲ ಸಮುದಾಯದವರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೊಹರಂ ಆಚರಣೆಗೆ ಎಲ್ಲ ಸಮುದಾಯದವರು ವಂತಿಗೆ ನೀಡಿ ಸಹಕರಿಸುತ್ತಾರೆ. ಬೆನಕನ ಅಮವಾಸ್ಯೆಯ ಮೂರನೇ ದಿನ ಗುದ್ದಲಿ ಪೂಜೆಯೊಂದಿಗೆ ಗ್ರಾಮಸ್ಥರು ಮೊಹರಂಗೆ ಚಾಲನೆ ನೀಡುತ್ತಾರೆ. ಮುಜಾವರ ಸಾಬಣ್ಣ ಅವರನ್ನು ಆಮಂತ್ರಿಸಿ ಬಸವಣ್ಣ ದೇವಸ್ಥಾನದ ಜಗುಲಿಯ ಮೇಲೆ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸುತ್ತಾರೆ. ಮುಜಾವರರು ಬೆಳಿಗ್ಗೆ, ಸಂಜೆ ವಿಧಿ ವಿಧಾನಗಳಂತೆ ಓದಿಕೆ ಮಾಡುತ್ತಾರೆ.

ಕತ್ತಲ ರಾತ್ರಿ:

ಸೋಮವಾರ (ಸೆ.9) ಕತ್ತಲೆ ರಾತ್ರಿಯನ್ನು ಗ್ರಾಮದಲ್ಲಿ ವಿಶಿಷ್ಟವಾಗಿ ಆಚರಿಸುತ್ತಾರೆ. ಗ್ರಾಮದ ಎಲ್ಲರೂ ಸೇರಿ ಅಲೆಕುಣಿಯನ್ನು ಸಜ್ಜುಗೊಳಿಸುತ್ತಾರೆ. ಬನ್ನಿ ಮರದ ಕಟ್ಟಿಗೆಯನ್ನು ತಂದು ಅಲೆಕುಣಿಯಲ್ಲಿ ಉರಿಸುತ್ತಾರೆ. ಹರಕೆ ಹೊತ್ತ ಭಕ್ತರು ಬೆಳಗಿನ ಜಾವ ಪೀರಲ ದೇವರನ್ನು ಸ್ಮರಿಸುತ್ತಾ, ಕುಣಿಯುತ್ತಾ ನಿಗಿನಿಗಿ ಕೆಂಡವನ್ನು ತುಳಿಯುತ್ತಾರೆ. ಗ್ರಾಮದ ಪ್ರಮುಖ ಬೀದಿಯಲ್ಲಿ ದೇವರ ಮೆರವಣಿಗೆ ನಡೆಯುತ್ತದೆ.

ಹರಕೆ ಹೊತ್ತವರು ಉಪವಾಸವಿದ್ದು ದೀಡು ನಮಸ್ಕಾರ ಹಾಕುವುದು, ಪೀರಲ ದೇವರ ವಿಗ್ರಹಗಳನ್ನು ಒಪ್ಪಿಸುವುದು ಸೇರಿದಂತೆ ಇಡೀ ರಾತ್ರಿ ವಿವಿಧ ಆಚರಣೆಗಳು ನಡೆಯುತ್ತವೆ. ಬೆಳಿಗ್ಗೆ ಗ್ರಾಮದ ಎಲ್ಲರೂ ಪೀರಲ ದೇವರು ಪ್ರತಿಷ್ಠಾಪಿಸಿರುವ ಜಗುಲಿಗೆ ಹೋಗಿ ಸಕ್ಕರೆ, ಮಾದಲಿ ನೈವೇದ್ಯ ಅರ್ಪಿಸುತ್ತಾರೆ.

‘ಗ್ರಾಮದಲ್ಲಿ ಮುಸ್ಲಿಮರು ಇಲ್ಲದಿದ್ದರೂ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವಂತೆ ಹಿಂದೂಗಳೇ ಸೇರಿ ಮೊಹರಂ ಆಚರಿಸುತ್ತೇವೆ. ಯಾವುದೇ ಜಾತಿ ಭೇದವಿಲ್ಲದೇ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಬೇಡಿಕೊಂಡವರ ಕಷ್ಟ, ರೋಗ, ರುಜಿನಗಳು ದೂರವಾಗಿದ್ದರಿಂದ ಗ್ರಾಮದ ಭಕ್ತರು ಪೀರಲ ದೇವರ ಹಬ್ಬವನ್ನು ಶ್ರದ್ದೆಯಿಂದ ಆಚರಿಸುತ್ತಾರೆ’ ಎಂದು ಗ್ರಾಮದ ಯುವಕ ಲಕ್ಷ್ಮಣ ಬಾರ್ಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.