ADVERTISEMENT

11 ಜನರ ಸಾವಿಗೆ ಸರ್ಕಾರದ ವೈಫಲ್ಯ ಕಾರಣ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:44 IST
Last Updated 7 ಜೂನ್ 2025, 13:44 IST
ಬಿ. ಶ್ರೀರಾಮುಲು 
ಬಿ. ಶ್ರೀರಾಮುಲು    

ಬಳ್ಳಾರಿ: ‘ಆರ್‌ಸಿಬಿ ಕ್ರಿಕೆಟ್ ತಂಡದ ಸಂಭ್ರಮಾಚರಣೆ ವೇಳೆ ನಡೆದ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಸಚಿವರ ಸೆಲ್ಫಿ–ರೀಲ್ಸ್ ಹುಚ್ಚು ಅಲ್ಲದೇ ಸರ್ಕಾರದ ವೈಫಲ್ಯವೂ ಕಾರಣ. ಪ್ರಚಾರಪ್ರಿಯತೆ ಮತ್ತು ನಿರ್ಲಕ್ಷ್ಯದಿಂದ ಅವಘಡ ನಡೆದಿದೆ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.

‘ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎ–1 ಆರೋಪಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಎ–2, ಗೃಹ ಸಚಿವ ಪರಮೇಶ್ವರ ಅವರನ್ನು ಎ–3 ಆರೋಪಿಯನ್ನಾಗಿ ಮಾಡಿ, ಎಫ್‌ಐಆರ್‌ ದಾಖಲಿಸಬೇಕು. ಈ ಕೂಡಲೇ ಮೂವರನ್ನು ಬಂಧಿಸಬೇಕು. ಈ ಎಲ್ಲದರ ತನಿಖೆ ಸಿಬಿಐನಿಂದ ಆಗಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. 

‘ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳ ಮಕ್ಕಳ ಸೆಲ್ಫಿಗಾಗಿ ವಿಶೇಷ ವಿಮಾನದಲ್ಲಿ ಆಟಗಾರರನ್ನು ಕರೆಸಿಕೊಂಡ ಸರ್ಕಾರವು 11 ಜನರ ದುರಂತ ಸಾವಿಗೆ ಕಾರಣವಾಗಿದೆ. ಅದರ ಹೊಣೆಹೊತ್ತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹಸಚಿವರು ರಾಜೀನಾಮೆ ನೀಡಬೇಕು. ಇದರ ಕುರಿತು ಚರ್ಚೆಗೆ ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ಮೃತರ ಕುಟುಂಬಕ್ಕೆ ಕನಿಷ್ಠ ₹1 ಕೋಟಿ ಪರಿಹಾರ ಕೊಡಬೇಕು’ ಎಂದರು.

ADVERTISEMENT

‘ಆಟಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಾರವು ರಾಜ್ಯಪಾಲರನ್ನು ಅಪಮಾನಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅನಗತ್ಯವಾಗಿ 20 ನಿಮಿಷ ಕಾಯಿಸಿ ಅಪಚಾರ ಮಾಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.