ADVERTISEMENT

ಬಳ್ಳಾರಿ: ಡಿಎಂಎಫ್‌ ನಿಧಿ ವರ್ಗಾವಣೆ ಸಿಂಧು

ಪಿಎಂಕೆಕೆಕೆವೈ ಅಡಿಯ ನಿಮಗಳಿಗೆ ಅನುಸಾರವಾಗಿ ಬಳ್ಳಾರಿಯಿಂದ ವಿಜಯನಗರಕ್ಕೆ ಹಣ ಎಂದ ಕೇಂದ್ರ

ಆರ್. ಹರಿಶಂಕರ್
Published 21 ನವೆಂಬರ್ 2025, 7:39 IST
Last Updated 21 ನವೆಂಬರ್ 2025, 7:39 IST
   

ಬಳ್ಳಾರಿ: ಬಳ್ಳಾರಿ ಜಿಲ್ಲೆಯಿಂದ ವಿಭಜನೆಯಾಗಿ ರಚನೆಗೊಂಡ ವಿಜಯನಗರ ಜಿಲ್ಲೆಗೆ ಬಳ್ಳಾರಿಯ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ (ಡಿಎಂಎಫ್‌)ನಿಂದ ನಿಧಿ ವರ್ಗಾವಣೆ ಮಾಡುತ್ತಿರುವುದು ಕ್ರಮಬದ್ಧವಾಗಿದೆ ಎಂದು ಕೇಂದ್ರ ಗಣಿ ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ (ಪಿಎಂಕೆಕೆಕೆವೈ) ಅಡಿಯ ನಿಯಮಗಳಿಗೆ ಅನುಸಾರವಾಗಿ ನಿಧಿ ವರ್ಗಾವಣೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ ಸಂಗ್ರಹವಾಗುವ ಡಿಎಂಎಫ್ ನಿಧಿಗಳನ್ನು ವಿಜಯನಗರ ಜಿಲ್ಲೆಗೆ ಕಾನೂನು ಮೀರಿ ವರ್ಗಾಯಿಸಲಾಗುತ್ತಿದೆ ಎಂದು ಜನಸಂಗ್ರಾಮ ಪರಿಷತ್ತಿನ ಮುಖಂಡ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಕೇಂದ್ರ ಗಣಿ ಇಲಾಖೆಗೆ ಪತ್ರ ಬರೆದಿದ್ದರು. ಮಲ್ಲಿಕಾರ್ಜುನ ರೆಡ್ಡಿ ಅವರ ಪತ್ರಕ್ಕೆ ಉತ್ತರ ನೀಡಿರುವ ಗಣಿ ಸಚಿವಾಲಯ ಈ ಮೇಲಿನ ವಿಷಯಗಳನ್ನು ಅರುಹಿದೆ.  

ADVERTISEMENT

‘ಕರ್ನಾಟಕ ಸರ್ಕಾರವು ಈ ವಿಷಯವನ್ನು ಪರಿಶೀಲಿಸಿದೆ. ಅಂತರ ಜಿಲ್ಲಾ ವರ್ಗಾವಣೆಗೆ ಇರುವ ಸಿಂಧುತ್ವವನ್ನು ಖಚಿತ ಪಡಿಸಿಕೊಳ್ಳಲಾಗಿದೆ’ ಎಂದು ಸಚಿವಾಲಯ ಹೇಳಿದೆ.

2024ರ ಪರಿಷ್ಕೃತ ಪಿಎಂಕೆಕೆಕೆವೈ ಮಾರ್ಗಸೂಚಿಗಳ ಸೆಕ್ಷನ್ 2(ಡಿ) ಅನ್ನು ಉಲ್ಲೇಖಿಸಿರುವ ಕೇಂದ್ರ ಗಣಿ ಇಲಾಖೆ, ‘ಗಣಿಗಾರಿಕೆ ಪೀಡಿತ ಪ್ರದೇಶವು ಒಂದು ಜಿಲ್ಲೆಯನ್ನು ಮೀರಿ ವಿಸ್ತರಿಸಿದ್ದಲ್ಲಿ, ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟು ಅನುದಾನದ ಅಂತರ ಜಿಲ್ಲಾ ವರ್ಗಾವಣೆಗೆ ಅನುಮತಿ ಇದೆ’ ಎಂದು ಸಚಿವಾಲಯ ತಿಳಿಸಿದೆ.

‘ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳು 2,33,500 ಹೆಕ್ಟೇರ್‌ ಪ್ರದೇಶದ ಮೇಲೆ ಪರಿಣಾಮ ಬೀರಿವೆ. ಅದರಲ್ಲಿ 76,004 ಹೆಕ್ಟೇರ್‌ ಪ್ರದೇಶ ಈಗಿನ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲ್ಲೂಕುಗಳನ್ನು ಒಳಗೊಂಡಿದೆ’ ಎಂದು ಪತ್ರದಲ್ಲಿ ಕೇಂದ್ರ ಸರ್ಕಾರ ತಿಳಿಸಲಾಗಿದೆ.

ಆದ್ದರಿಂದ, ಬಳ್ಳಾರಿ ಡಿಎಂಎಫ್‌ನಿಂದ ವಿಜಯನಗರಕ್ಕೆ ‌ನಿಧಿಯಳ ವರ್ಗಾವಣೆಯು ಅಸ್ತಿತ್ವದಲ್ಲಿರುವ ಡಿಎಂಎಫ್ ಮತ್ತು ಪಿಎಂಕೆಕೆಕೆವೈ ಮಾರ್ಗಸೂಚಿಗಳಿಗೆ ಅನುಗುಣವಾಗಿದೆ ಎಂದು ಸಚಿವಾಲಯ ತೀರ್ಮಾನಿಸಿದೆ.

ಏನಿದು ವಿವಾದ?

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾದ ಬಳಿಕ ವಿಜಯನಗರ ಜಿಲ್ಲೆಗೆ ಮೂಲಸೌಲಭ್ಯ ಒದಗಿಸುವ ಕುರಿತು 2021ರ ಸೆ. 6ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಅಂದು ಸಚಿವರಾಗಿದ್ದ ಆನಂದ್‌ ಸಿಂಗ್‌, ಬಳ್ಳಾರಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆ ಸಭೆಯಲ್ಲಿ ಇದ್ದರು. 

ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಪ್ರತಿ ವರ್ಷ ಶೇ 33 ರಷ್ಟು ಹಣವನ್ನು ವರ್ಗಾವಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆಯನ್ನೂ ಪಡೆಯಲಾಗಿತ್ತು.

ಅದರಂತೆ 2021ರಿಂದ 2024ರ ನಡುವಿನ ಅವಧಿಯಲ್ಲಿ ಒಟ್ಟು ₹485.54 ಕೋಟಿಯನ್ನು ವಿಜಯನಗರ ಜಿಲ್ಲೆಗೆ ನೀಡಲಾಗಿದೆ. 

ಬಳಿಕ ಸಂಡೂರು ತಾಲ್ಲೂಕಿನಲ್ಲಿ ಸಂಗ್ರಹವಾಗುವ ಡಿಎಂಎಫ್‌ ನಿಧಿಯ ಒಟ್ಟಾರೆ ಹಣದ ಶೇ28 ನ್ನು ನೀಡಬೇಕು ಎಂದು ಬಳ್ಳಾರಿ ಜಿಲ್ಲೆಗೆ ನಿರ್ದೇಶನ ನೀಡಲಾಯಿತು. ಅದರಂತೆ 2024ರ ಜುಲೈ 23ರಂದು ₹210.36 ಕೋಟಿಯನ್ನು ವಿಜಯನಗರ ಜಿಲ್ಲೆಗೆ ವರ್ಗಾಯಿಸಲಾಗಿದೆ. 2024–25ರ ಪಾಲಿನ ಹಣ ವರ್ಗಾವಣೆಗೆ ಜಿಲ್ಲಾಡಳಿತವು ಗಣಿ ಇಲಾಖೆಯ ನಿರ್ದೇಶನ ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.