ADVERTISEMENT

ಬಳ್ಳಾರಿ | ವೈದ್ಯರ ಸಲಹೆ ಇಲ್ಲದೆ ಸ್ಕ್ಯಾನಿಂಗ್‌ ಬೇಡ: ಡಿಎಚ್‌ಒ

‘ಗಂಡಾಂತರ ಸ್ಥಿತಿಯ ಗರ್ಭೀಣಿ’ಯರ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:08 IST
Last Updated 25 ಜುಲೈ 2024, 15:08 IST
ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‌ ಬಾಬು ಗರ್ಭಿಣಿಯರ ತಪಾಸಣೆ ನಡೆಸಿದರು
ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಮೇಶ್‌ ಬಾಬು ಗರ್ಭಿಣಿಯರ ತಪಾಸಣೆ ನಡೆಸಿದರು   

ಬಳ್ಳಾರಿ: ‘ವೈದ್ಯರ ಸಲಹೆ ಇಲ್ಲದೆ ಗರ್ಭಿಣಿಯರು ಸ್ಕ್ಯಾನಿಂಗ್‌ ಮಾಡಿಸಬಾರದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಸಲಹೆ ನೀಡಿದರು.

‘ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ’ ಅಭಿಯಾನದಡಿ ಜಿಲ್ಲೆಯ ‘ಗಂಡಾಂತರ ಸ್ಥಿತಿಯ ಗರ್ಭೀಣಿ’ಯರ ಆರೋಗ್ಯ ತಪಾಸಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಅವರು, ಖುದ್ದು ಗರ್ಭಿಣಿಯರ ತಪಾಸಣೆ ನಡೆಸಿದರು.

‘ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಗರ್ಭಿಣಿಯೆಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ್ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಸ್ಕ್ಯಾನಿಂಗ್‌ ಮಾಡಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು’ ಎಂದರು.

ADVERTISEMENT

‘ಗರ್ಭಿಣಿಯೆಂದು ತಿಳಿದ ನಂತರ ವೈದ್ಯರ ಸಲಹೆಯಂತೆ ಎರಡೂವರೆ ತಿಂಗಳಿಂದ ಮೂರೂವರೆ ತಿಂಗಳ ಅವಧಿಯಲ್ಲಿ ಮೊದಲ ಬಾರಿ, ನಾಲ್ಕೂವರೆ ತಿಂಗಳಿನಿಂದ ಐದೂವರೆ ತಿಂಗಳಿನಲ್ಲಿ ಎರಡನೇ ಬಾರಿ, ಎಂಟೂವರೆ ತಿಂಗಳಿನಿಂದ ಒಂಭತ್ತನೇ ತಿಂಗಳಿನಲ್ಲಿ ಮೂರನೇ ಬಾರಿ ಸ್ಕ್ಯಾನಿಂಗ್‌ ಮಾಡಿಸಬೇಕು. ತೀರ ಅಗತ್ಯವೆನಿಸಿದಲ್ಲಿ ತಜ್ಞರ ಸಲಹೆಯಂತೆ ಹೆಚ್ವುವರಿಯಾಗಿ ಸ್ಕ್ಯಾನಿಂಗ್‌ ಮಾಡಿಸಬೇಕು’ ಎಂದು ತಿಳಿಸಿದರು.

ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಔಷಧಾಧಿಕಾರಿ ವೀಣಾ, ಶುಶ್ರೂಷಣಾಧಿಕಾರಿ ಸುನೀತಾ, ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞೆ ಶ್ವೇತಾ ಸೇರಿದಂತೆ ಆಶಾ, ತಾಯಂದಿರು ಇದ್ದರು.

ಗಂಡಾಂತರ ಸ್ಥಿತಿಯ ಗರ್ಭೀಣಿಯರು:

18 ವರ್ಷಕ್ಕಿಂತ ಮೊದಲು ಅಥವಾ 30 ವರ್ಷ ವಯಸ್ಸಿನ ನಂತರದ ಗರ್ಭಿಣಿಯಾದವರು, ರಕ್ತದಲ್ಲಿ ಕಬ್ಬಿಣಾಂಶ 9 ಕ್ಕಿಂತ ಕಡಿಮೆ, ಎತ್ತರ 142 ಸೆಂ.ಮೀ ಗಿಂತ ಕಡಿಮೆ, ರಕ್ತದೊತ್ತಡ 140/90ಗಿಂತ ಹೆಚ್ಚು, ಅವಳಿ-ಜವಳಿ ಭ್ರೂಣ ಹೊಂದಿರುವವರು, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕ ಆಗಿರುವವರು, ಎಚ್‌ಐವಿ, ಎಚ್‌ಬಿಎಸ್‌ಎಸಿಜಿ, ಮುರ್ಛೆರೋಗ, ಥೈರಾಯ್ಡ್, ಹೈಪೊಥೈರಾಯ್ಡ್, ರಕ್ತ ಸಂಬಂಧಿತ  ಖಾಯಿಲೆಗಳಿದ್ದಲ್ಲಿ, ಗರ್ಭಕೋಶದ ಬೆಳವಣಿಗೆಯ ತೊಂದರೆ, ಮಗು ಅಡ್ಡಲಾಗಿ ಇರುವುದು, ಮಾಸದ ಸ್ಥಳದ ಅಡಚಣೆ (ಪ್ಲಸೇಂಟಾ ಪ್ರಿವಿಯಾ) ಮುಂತಾದ ತೊಂದರೆಗಳು ಇರುವವರನ್ನು ಗಂಡಾಂತರ ಸ್ಥಿತಿಯ ಗರ್ಭಿಣಿಯರು ಎಂದು ಪರಿಗಣಿಸಲಾಗುತ್ತಿದ್ದು, ವೈದ್ಯರ ನಿರ್ದೇಶನ ಮೇರೆಗೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂದು ಡಿಎಚ್‌ಒ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.