ADVERTISEMENT

ಕೃಷ್ಣದೇವರಾಯರ ಕಾಲಿನ ಧೂಳಿಗೂ ನಾನು ಸಮನಲ್ಲ, ಹೋಲಿಕೆ ಬೇಡ: ಸಚಿವ ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 9:56 IST
Last Updated 18 ಅಕ್ಟೋಬರ್ 2021, 9:56 IST
ಆರ್ಯವೈಶ್ಯ ಸಂಘದ ಮುಖಂಡರು ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಅಭಿನವ ಶ್ರೀಕೃಷ್ಣದೇವರಾಯ ಬಿರುದು, ಬೆಳ್ಳಿ ಖಡ್ಗ ಕೊಟ್ಟು ಸನ್ಮಾನಿಸಿದರು
ಆರ್ಯವೈಶ್ಯ ಸಂಘದ ಮುಖಂಡರು ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಅಭಿನವ ಶ್ರೀಕೃಷ್ಣದೇವರಾಯ ಬಿರುದು, ಬೆಳ್ಳಿ ಖಡ್ಗ ಕೊಟ್ಟು ಸನ್ಮಾನಿಸಿದರು   

ಹೊಸಪೇಟೆ (ವಿಜಯನಗರ): ‘ವಿಜಯನಗರದ ಅರಸ ಶ್ರೀಕೃಷ್ಣದೇವರಾಯನೊಂದಿಗೆ ನನ್ನ ಹೋಲಿಕೆ ಬೇಡ. ಅವರ ಕಾಲಿನ ಧೂಳಿಗೂ ನಾನು ಸಮನಲ್ಲ. ಅವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಆರ್ಯವೈಶ್ಯ ಸಂಘದಿಂದ ನಗರದ ವಾಸವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನವ ಶ್ರೀ ಕೃಷ್ಣದೇವರಾಯ ಬಿರುದು, ಬೆಳ್ಳಿ ಖಡ್ಗ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕೃಷ್ಣದೇವರಾಯನ ಆಡಳಿತದ ಮಾದರಿ ಅನುಸರಿಸೋಣ. ಅವರ ಹೆಜ್ಜೆಯಲ್ಲಿ ನಡೆಯೋಣ. ನಿಮ್ಮ ಅಭಿಮಾನಕ್ಕೆ ನಾನು ಬೇಡ ಎನ್ನುವುದಿಲ್ಲ. ಆದರೆ, ಕೃಷ್ಣದೇವರಾಯನೊಂದಿಗೆ ಹೋಲಿಕೆ ಮಾಡಿದರೆ ನನಗೆ ಮುಜುಗರವಾಗುತ್ತದೆ. ಅವರು ಅವರೇ–ನಾವು ನಾವೇ’ ಎಂದರು.

ADVERTISEMENT

‘ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಾಗುವುದು. ಕೊಪ್ಪಳ, ಯಾದಗಿರಿ ಜಿಲ್ಲೆಗಳಂತೆ ಅಭಿವೃದ್ಧಿ ಕಾರ್ಯಗಳು ವಿಳಂಬವಾಗಲು ಬಿಡುವುದಿಲ್ಲ. ಅಲ್ಲದೇ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮಿಸುವೆ. ಸಂಡೂರು ರಸ್ತೆಯ ಎಲ್‌ಎಫ್‌ಎಸ್‌ ಶಾಲೆ ಎದುರು ಮೆಡಿಸಿಟಿ ನಿರ್ಮಿಸುವ ಯೋಜನೆ ಇದೆ’ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಮುದುಗಲ್‌ ಸತ್ಯನಾರಾಯಣ ಶೆಟ್ಟಿ ಮಾತನಾಡಿ, ‘ನಗರದ ತಹಶೀಲ್ದಾರ್‌ ಕಚೇರಿ ಬಳಿಯ ವೃತ್ತದಲ್ಲಿ ಜಿಲ್ಲೆಯ ರೂವಾರಿ ಆನಂದ್‌ ಸಿಂಗ್‌ ಅವರ ಪುತ್ಥಳಿ ನಿರ್ಮಿಸಲಾಗುವುದು. ಅದಕ್ಕಾಗಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ರಚಿಸಲಾಗುವುದು. ಅದಕ್ಕಾಗಿ ವೈಯಕ್ತಿಕವಾಗಿ ನಾನು ₹1 ಲಕ್ಷ ದೇಣಿಗೆ ಕೊಡುವೆ’ ಎಂದರು.

ಸಂಘದ ಅಧ್ಯಕ್ಷ ಪತ್ತಿಕೊಂಡ ಕುಮಾರಸ್ವಾಮಿ, ಮುಖಂಡರಾದ ಭೂಪಾಳ ರಾಘವೇಂದ್ರ, ಅರಳಿ ಜಯಲಕ್ಷ್ಮಿ, ರಮೇಶ ಗುಪ್ತಾ, ಭೂಪಾಳ ಪ್ರಹ್ಲಾದ, ಕಾಕುಬಾಳು ರಾಜೇಂದ್ರ, ಕೆ. ಸೋಮಶೇಖರ್‌, ಎಸ್‌. ಸಂಜೀವಪ್ಪ ಶೆಟ್ಟಿ, ರಾಘವೇಂದ್ರ ಶೆಟ್ಟಿ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.