ADVERTISEMENT

‘ಕಾಂಗ್ರೆಸ್‌ ಸ್ಥಿತಿ ಬಿಜೆಪಿಗೆ ಬರುವುದು ಬೇಡ’

ಅಧಿಕಾರದಲ್ಲಿದ್ದಾಗಲೂ ಪಕ್ಷ ಸಂಘಟನೆ ಅಗತ್ಯ– ಬಿಜೆಪಿ ಸಂಘಟನಾ ಕಾರ್ಯದರ್ಶಿ ಅನಿಲ್‌ ನಾಯ್ಡು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 6:32 IST
Last Updated 19 ಜುಲೈ 2019, 6:32 IST
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿದರು–ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಪಕ್ಷ ಅಧಿಕಾರದಲ್ಲಿ ಇದ್ದಾಗ ಮೈಮರೆತು ಕುಳಿತುಕೊಳ್ಳಬಾರದು. ವರ್ಷದ ಎಲ್ಲ ದಿನ ಪಕ್ಷ ಸಂಘಟನೆಯ ಕೆಲಸವಾಗಬೇಕು. ಕಾಂಗ್ರೆಸ್‌ ಪಕ್ಷ ಸಂಘಟನೆಗಿಂತ ಅಧಿಕಾರ ರಾಜಕೀಯಕ್ಕೆ ಹೆಚ್ಚು ಒತ್ತು ಕೊಟ್ಟ ಕಾರಣ ಆ ಪಕ್ಷ ಇಂದು ದಯನೀಯ ಸ್ಥಿತಿಗೆ ತಲುಪಿದೆ. ಅಂತಹ ಪರಿಸ್ಥಿತಿ ಬಿಜೆಪಿಗೆ ಬರುವುದು ಬೇಡ’ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಿಲ್‌ ನಾಯ್ಡು ಎಚ್ಚರಿಸಿದರು.

ಗುರುವಾರ ಸಂಜೆ ನಗರದ ವಡಕರಾಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೆಲವು ರಾಜಕೀಯ ಪಕ್ಷಗಳು ಚುನಾವಣೆ ಬಂದಾಗಲಷ್ಟೇ ಸಕ್ರಿಯವಾಗುತ್ತವೆ. ಅದು ಬಿಜೆಪಿಯಲ್ಲಿ ಆಗುವುದು ಬೇಡ. ಈ ಪಕ್ಷವನ್ನು ಹಿರಿಯರು ಬಹಳ ದೂರದೃಷ್ಟಿಯಿಂದ ಕಟ್ಟಿ ಬೆಳೆಸಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

‘ರಾಜೀವ ಗಾಂಧಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ಕಾಂಗ್ರೆಸ್‌ ಪಕ್ಷಕ್ಕೆ 400ಕ್ಕಿಂತ ಅಧಿಕ ಸ್ಥಾನಗಳು ಬಂದಿದ್ದವು. 18 ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿತ್ತು. ಆದರೆ, ನಂತರದ ದಿನಗಳಲ್ಲಿ ಆ ಪಕ್ಷ ಅಧಿಕಾರಕ್ಕೆ ಹೆಚ್ಚು ಒತ್ತು ಕೊಡುತ್ತ ಹೋಯಿತು ಹೊರತು ಪಕ್ಷ ಸಂಘಟನೆಯತ್ತ ಮುಖ ಮಾಡಲಿಲ್ಲ. ಅದರ ಪರಿಣಾಮ ಆ ಪಕ್ಷ ಇಂದು ಅನುಭವಿಸುತ್ತಿದೆ’ ಎಂದರು.

‘ಆರಂಭದಲ್ಲಿ ಬಿಜೆಪಿಯ ಇಬ್ಬರು ಸಂಸದರು ಮಾತ್ರ ಲೋಕಸಭೆಗೆ ಪ್ರವೇಶಿಸಿದ್ದರು. ಕಾಂಗ್ರೆಸ್‌ ಸದಸ್ಯರು ಅವರನ್ನು ಅಣಕಿಸುತ್ತಿದ್ದರು. ‘ನೀವಿಬ್ಬರೂ ಏನೂ ಮಾಡುತ್ತೀರಿ ನಮ್ಮ ಪಕ್ಷಕ್ಕೆ ಬನ್ನಿ’ ಎಂದು ಹೇಳುತ್ತಿದ್ದರು. ‘ಈ ಪರಿಸ್ಥಿತಿ ನಿಮ್ಮ ಪಕ್ಷಕ್ಕೆ ಭವಿಷ್ಯದಲ್ಲಿ ಬರಲಿದೆ‘ ಎಂದು ಅಟಲ್‌ ಬಿಹಾರಿ ವಾಜಪೇಯಿ ಭವಿಷ್ಯ ನುಡಿದಿದ್ದರು. ಅದು ಈಗ ನಿಜವಾಗಿದೆ’ ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ‘ಬಹಳ ಕಡಿಮೆ ಅವಧಿಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಆರು ಸಾವಿರ ಸದಸ್ಯತ್ವ ಆಗಿದೆ. ಇದು 50 ಸಾವಿರ ಗಡಿ ದಾಟಬೇಕು’ ಎಂದು ಹೇಳಿದರು.

‘ಲೋಕಸಭೆ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎರಡುವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅದನ್ನು ಮೀರಿಸಿ 50 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇವೆ. ಇದು ಸಾಧ್ಯವಾಗಿದ್ದು ಪಕ್ಷದ ಸಂಘಟನೆಯಿಂದ. ಈ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು’ ಎಂದು ತಿಳಿಸಿದರು.

ಮುಖಂಡರಾದ ಅನಂತ ಪದ್ಮನಾಭ, ಭರಮನಗೌಡ, ವೈ. ಯಮುನೇಶ, ಸಾಲಿ ಸಿದ್ದಯ್ಯ ಸ್ವಾಮಿ, ಸಂಜೀವ ರೆಡ್ಡಿ, ಗುಂಡಿ ಶ್ರೀಕಾಂತ, ಕಟಗಿ ರಾಮಕೃಷ್ಣ, ರಾಮನಗೌಡ, ಚಂದ್ರಕಾಂತ ಕಾಮತ್‌, ಶ್ರೀಧರ ನಾಯ್ಡು, ಶಂಕರ್‌ ಮೇಟಿ, ಗೋಸಲ ಭರಮಪ್ಪ, ಮಧುಸೂದನ್‌, ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.