ADVERTISEMENT

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ರಾಜಕೀಯ ಟೀಕೆ ಬೇಡ, ಸಲಹೆ ಕೊಡಿ: ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 13 ಮೇ 2020, 14:41 IST
Last Updated 13 ಮೇ 2020, 14:41 IST
   

ಹೊಸಪೇಟೆ: ‘ಕೊರೊನಾದಿಂದ ಉದ್ಭವಿಸಿರುವ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕಾಗಿ ಯಾರೂ ಟೀಕೆ, ಟಿಪ್ಪಣಿ ಮಾಡಬಾರದು. ಅದರ ಬದಲು ಉತ್ತಮ ಸಲಹೆಗಳಿದ್ದರೆ ಕೊಡಿ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಬುಧವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಡೀ ಮಾನವಕುಲಕ್ಕೆ ಕಂಟಕ ಎದುರಾಗಿದೆ. ಪಕ್ಷಾತೀತವಾಗಿ ಅದನ್ನು ಉಳಿಸಿಕೊಳ್ಳಲು ಶ್ರಮಿಸಬೇಕಿದೆ. ಎಲ್ಲಾ ರಾಜ್ಯ ಸರ್ಕಾರಗಳು ಪ್ರಧಾನಿಯವರ ಮಾತಿಗೆ ಕಿವಿಗೊಡುತ್ತಿವೆ. ಅದೇ ಪ್ರಕಾರ ಜನ ಕೂಡ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಕೊರೊನಾದಿಂದ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ವಿಶೇಷ ಪ್ಯಾಕೇಜ್‌ ಘೋಷಿಸಿ ಅವರ ನೆರವಿಗೆ ಬಂದಿರುವುದು ಸ್ವಾಗತಾರ್ಹ. ಕಷ್ಟಕಾಲದಲ್ಲಿ ಪ್ರಧಾನಿ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಇಂತಹ ನಾಯಕ ಸಿಕ್ಕಿರುವುದು ಭಾರತೀಯರ ಅದೃಷ್ಟ’ ಎಂದು ವರ್ಣಿಸಿದರು.

ADVERTISEMENT

ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ‘ಪ್ರಧಾನಿ ಘೋಷಿಸಿರುವ ವಿಶೇಷ ಪ್ಯಾಕೇಜ್‌ನಿಂದ ಪರೋಕ್ಷ, ಅಪರೋಕ್ಷವಾಗಿ ದೇಶದ ಪ್ರತಿ ಪ್ರಜೆಗೂ ₹15,000 ಪ್ರಯೋಜನ ಸಿಗಲಿದೆ. ಕಷ್ಟಕಾಲದಲ್ಲಿ ಜನರ ನೆರವಿಗೆ ಬರಬೇಕೆಂದು ನಾನು ಕೂಡ ಪ್ರಧಾನಿಗೆ ಪತ್ರ ಬರೆದಿದ್ದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಾತನಾಡಿ, ‘ಜನರ ಸಹಕಾರದಿಂದ ಮಾತ್ರ ಕೊರೊನಾ ಸೋಂಕು ಹರಡದಂತೆ ತಡೆಯಬಹುದು. ಪ್ರತಿಯೊಬ್ಬರೂ ನಿಯಮಗಳನ್ನು ಅನುಸರಿಸಬೇಕು. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಸ್ವಾಭಿಮಾನ, ಸಶಕ್ತ ಭಾರತ ಕಟ್ಟಲು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತ ಪದ್ಮನಾಭ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿಗಳಾದ ಜೀವರತ್ನಂ, ಶಂಕರ್‌ ಮೇಟಿ ಇದ್ದರು.

**

ಇನ್ನೂ ಮುಂದೆ ಹೊಸ ಜೀವನ ಪ್ರಾರಂಭವಾಗಲಿದೆ. ಅದು ಹಿಂದಿನಂತೆ ಅಷ್ಟು ಸುಲಭವಲ್ಲ. ಕೊರೊನಾ ಜತೆ ಜೀವನ ನಡೆಸುವ ಅಗತ್ಯವಿದೆ.
–ಆನಂದ್‌ ಸಿಂಗ್‌, ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.