ADVERTISEMENT

ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ- ನ್ಯಾಯಾಧೀಶೆ ಪುಷ್ಪಾಂಜಲಿ ದೇವಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:30 IST
Last Updated 8 ಮಾರ್ಚ್ 2021, 6:30 IST
   

ಬಳ್ಳಾರಿ: 'ಹಲವು ‌ಬಗೆಯ ಒತ್ತಡಗಳಲ್ಲಿ ಪ್ರತಿನಿತ್ಯ ಕೆಲಸ‌ ಮಾಡುವ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ' ಎಂದು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶೆ ಎಸ್.ಹೆಚ್.ಪುಷ್ಪಾಂಜಲಿದೇವಿ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, 'ಕ್ರೀಡಾ ಸಾಧನೆಯಿಂದಲೇ ಡಿವೈಎಸ್ಪಿ ಹುದ್ದೆ ಪಡೆದ ಹಿಮಾದಾಸ್‌ ಅವರು ಪೊಲೀಸರಿಗೆ ಮಾದರಿಯಾಗಬೇಕು' ಎಂದು ಹೇಳಿದರು.

'ಕ್ರೀಡೆಯಲ್ಲಿ ಭಾಗವಹಿಸುವುದು ಒಂದು ಉತ್ತಮ ಅಭ್ಯಾಸ. ಒಳ್ಳೆಯ ಆರೋಗ್ಯವನ್ನು ಪಡೆಯಲು ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ. ನಿರುತ್ಸಾಹವನ್ನು ಬಿಟ್ಟು ಉತ್ಸಾಹದಿಂದ ಜೀವನ ಸಾಗಿಸಲು ಕ್ರೀಡೆ ತುಂಬಾ ಮುಖ್ಯವಾದದ್ದು. ನೀವು ಅದಾಗಲೇ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೀವನದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ನೆರವಾಗುತ್ತದೆ' ಎಂದು ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಉಪಸ್ಥಿತರಿದ್ದರು.

ಎಂಟು ತಂಡಗಳು: ಕ್ರೀಡಾಕೂಟದಲ್ಲಿ ಶೌರ್ಯ, ಕೋಟೆ, ವೇದಾವತಿ, ವಿಜಯನಗರ, ದುರ್ಗಾ, ಲೋಹಾದ್ರಿ, ತುಂಗಭದ್ರಾ, ಹಂಪಿ ತಂಡ ಸೇರಿದಂತೆ ಒಟ್ಟು ಎಂಟು ತಂಡಗಳಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ.

ಮಾ.10ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಐಜಿಪಿ ಎಂ.ನಂಜುಂಡಸ್ವಾಮಿ ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.