ADVERTISEMENT

ಉದ್ಯೋಗಕ್ಕೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 10:55 IST
Last Updated 14 ಆಗಸ್ಟ್ 2021, 10:55 IST
ಡಿವೈಎಫ್‌ಐ ಕಾರ್ಯಕರ್ತರು ಶನಿವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಡಿವೈಎಫ್‌ಐ ಕಾರ್ಯಕರ್ತರು ಶನಿವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ಕಾರ್ಯಕರ್ತರು ಶನಿವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಶ್ರಮಿಕ ಭವನದಿಂದ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ್‌ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ಅಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪ್ರಧಾನಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ ಮಾತನಾಡಿ, ‘ಲಕ್ಷಾಂತರ ಯುವಕರು ಉನ್ನತ ಶಿಕ್ಷಣ ಮುಗಿಸಿ, ಉದ್ಯೋಗ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಅವರಿಗೆ ಉದ್ಯೋಗ ಕೊಡುವವರೆಗೆ ಸರ್ಕಾರ ನಿರುದ್ಯೋಗ ಭತ್ಯೆ ಕೊಡಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಎಲ್ಲ ರಂಗಗಳಲ್ಲಿ ಖಾಸಗಿಯವರಿಗೆ ಮಣೆ ಹಾಕುತ್ತಿರುವುದರಿಂದ ಉದ್ಯೋಗ ನಾಶವಾಗುತ್ತಿವೆ. ಬ್ಯಾಂಕುಗಳ ವಿಲೀನ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ, ಕೃಷಿ ಕಾಯ್ದೆಗಳಿಗೆ ತಿದ್ದುಪಡಿ, ಹೊಸ ಶಿಕ್ಷಣ ನೀತಿ, ವಿದ್ಯುತ್‌ ತಿದ್ದುಪಡಿ ಮಸೂದೆಗಳಿಂದ ದೇಶಕ್ಕೆ ಮಾರಕವಾಗಲಿದೆ’ ಎಂದರು.

‘ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಚುನಾವಣೆಗೂ ಮುನ್ನ ಭರವಸೆ ಕೊಟ್ಟಿದ್ದರು. ಆದರೆ, ಈಗಿರುವ ಉದ್ಯೋಗಗಳನ್ನು ಜನ ಕಳೆದುಕೊಳ್ಳುತ್ತಿದ್ದಾರೆ. ತಪ್ಪು ಆರ್ಥಿಕ ನೀತಿಗಳು, ಕೋವಿಡ್‌ ಕಾರಣದಿಂದ ಅನೇಕರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ಬಿಸಾಟಿ ಮಹೇಶ್‌, ಕಲ್ಯಾಣಯ್ಯ, ಖಾಲಿದ್, ಅಲ್ತಾಫ್, ರೆಹಮಾನ್, ಕಾಸಿಂ, ಮಾಲತೇಶ್, ಶಿವಕುಮಾರ್, ಕೆ. ರಮೇಶ್, ಭಾಸ್ಕರ್ ರೆಡ್ಡಿ, ಜಂಬಯ್ಯ ನಾಯಕ, ಬಂಡೆ ತಿರುಕಪ್ಪ, ಹನುಮಂತ, ಸಜ್ಜದ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.