ಇ.ಡಿ
ಬಳ್ಳಾರಿ/ಹೊಸಪೇಟೆ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಏಕಕಾಲಕ್ಕೆ ಬಳ್ಳಾರಿ ಮತ್ತು ಹೊಸಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದರು.
ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ. ನಾಗರಾಜ್ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ವಿವಿಧ ದಾಖಲೆಪತ್ರಗಳನ್ನು ಪರಿಶೀಲಿಸಿದರು. ಈ ವೇಳೆ ನಾಗರಾಜ್ ಅವರು ಮನೆಯಲ್ಲಿ ಇರಲಿಲ್ಲ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಸ್ತಾಪವಾಗಿದ್ದ ಈಗಲ್ ಟ್ರಾನ್ಸ್‌ಪೋರ್ಟ್‌ನಲ್ಲಿ ನಾಗರಾಜ್ ಅವರ ಹೆಸರೂ ಕೂಡ ಕೇಳಿ ಬಂದಿತ್ತು.
ಹೊಸಪೇಟೆಯಲ್ಲಿ ಪ್ರಿಯದರ್ಶಿನಿ ಹೋಟೆಲ್ ಮಾಲೀಕರೂ ಆಗಿರುವ ಗಣಿ, ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ ರಾವ್ ಯಾನೆ ಸೀನಬಾಬು ಅವರ ಕಚೇರಿ, ಮನೆಗಳಲ್ಲಿ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶೋಧ ನಡೆಸಿದರು.
ಹೋಟೆಲ್‌ನ ಲೆಕ್ಕಪತ್ರ ವ್ಯವಹಾರದಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಸಂಜೆಯವರೆಗೆ ಪರಿಶೀಲನೆ ಮುಂದುವರಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಬ್ಯಾಂಕ್‌ಗಳ ಸಿಬ್ಬಂದಿಯನ್ನೂ ಸೇರಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ವ್ಯಕ್ತಿಗಳಲ್ಲಿ ಶ್ರೀನಿವಾಸ ರಾವ್ ಅವರೂ ಒಬ್ಬರಾಗಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳು, ಗಣಿ ಉದ್ಯಮಿಗಳ ಬೇನಾಮಿ ವ್ಯವಹಾರ ಇಲ್ಲಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಕೇಂದ್ರ ಹಣಕಾಸು ಸಚಿವರ ಜಿಲ್ಲಾ ಪ್ರವಾಸದ ವೇಳೆಯಲ್ಲೇ ಈ ದಾಳಿ ನಡೆದಿದೆ.
20 ಕಡೆಗಳಲ್ಲಿ ಇ.ಡಿ ಶೋಧ
ನವದೆಹಲಿ/ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕರ್ನಾಟಕ ಹಾಗೂ ಹರಿಯಾಣದ ವಿವಿಧೆಡೆಗಳಲ್ಲಿ ಗುರುವಾರ ಶೋಧ ಕಾರ್ಯ ನಡೆಸಿದರು.
ಹರಿಯಾಣದ ಗುರುಗ್ರಾಮ ಸೇರಿದಂತೆ ಕರ್ನಾಟಕದ ಬೆಂಗಳೂರು, ವಿಜಯನಗರ ಜಿಲ್ಲೆಯ ಹೊಸಪೇಟೆಯ 20 ಕಡೆಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ದಾಳಿ ನಡೆಸಲಾಗಿದೆ.
ಬೇಲೆಕೇರಿ ಬಂದರಿನ ಮೂಲಕ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆ ನಡೆದಿರುವುದು ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯಿಂದ ತಿಳಿದುಬಂದಿತ್ತು. ಅದರ ಆಧಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ, ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಸ್‌ಪಿಎಲ್ ಲಿಮಿಟೆಡ್ (ಬಲ್ಡೋಟಾ ಸಮೂಹ), ಗ್ರೀನ್‌ಟೆಕ್ಸ್ ಮೈನಿಂಗ್ ಇಂಡಸ್ಟ್ರೀಸ್ ಲಿಮಿಟೆಡ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂಪನಿ, ಅರ್ಷದ್ ಎಕ್ಸ್‌ಪೋರ್ಟ್ಸ್, ಎಸ್‌ವಿಎಂ ಎನ್‌ಇಟಿಟಿ ಪ್ರಾಜೆಕ್ಟ್ ಸಲ್ಯೂಷನ್ಸ್ ಪ್ರೈ.ಲಿ ಹಾಗೂ ಆಲ್‌ಫೈನ್ ಮಿನ್‌ಮೆಟಲ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಅವುಗಳ ಪ್ರಮುಖರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.