ADVERTISEMENT

ಭಕ್ತಿಭಾವದಿಂದ ಈದ್‌ ಮಿಲಾದ್‌ ಆಚರಣೆ

ಭವ್ಯ ಮೆರವಣಿಗೆಯಲ್ಲಿ ಗಮನ ಸೆಳೆದ ಮೆಕ್ಕಾ ಮದೀನಾ ಪ್ರತಿಕೃತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 9:43 IST
Last Updated 10 ನವೆಂಬರ್ 2019, 9:43 IST
ಈದ್‌ ಮಿಲಾದ್‌ ಪ್ರಯುಕ್ತ ಹೊಸಪೇಟೆಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು
ಈದ್‌ ಮಿಲಾದ್‌ ಪ್ರಯುಕ್ತ ಹೊಸಪೇಟೆಯಲ್ಲಿ ಭಾನುವಾರ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು   

ಹೊಸಪೇಟೆ: ಈದ್‌ ಮಿಲಾದ್‌ ಹಬ್ಬವನ್ನು ಭಾನುವಾರ ನಗರದಲ್ಲಿ ಬಹಳ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಮುಸ್ಲಿಮರು ಆಚರಿಸಿದರು.

ಬೆಳಿಗ್ಗೆ ಅವರವರ ಮನೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಮಸೀದಿಗೆ ಬಂದು ಪುನಃ ನಮಾಜ್‌ ಮಾಡಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ನಂತರ ನಡೆದ ಮೆರವಣಿಗೆಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ನೂರಾರು ಜನ ಸಾಕ್ಷಿಯಾದರು. ಚಿಣ್ಣರಿಂದ ವಯಸ್ಕರ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ, ಕಿವಿಗಡಚ್ಚಿಕ್ಕುವ ಸಂಗೀತಕ್ಕೆ ಮೈಮರೆತು ಭಕ್ತಿ ಭಾವದಿಂದ ಹೆಜ್ಜೆ ಹಾಕಿದರು.

ADVERTISEMENT

ಅರ್ಧ ಚಂದ್ರ ಇರುವ ಹಸಿರು ವರ್ಣದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು. ಮೆಕ್ಕಾ ಮದೀನಾ, ಜಾಮೀಯಾ ಮಸೀದಿ, ಕುತುಬ್‌ ಮಿನಾರ್‌ ಪ್ರತಿಕೃತಿಗಳು ಗಮನ ಸೆಳೆದವು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಚಿತ್ತವಾಡ್ಗಿ ರಸ್ತೆ, ಶ್ರಮಿಕ ಭವನ, ರಾಮ ಟಾಕೀಸ್‌, ಮೂರಂಗಡಿ ವೃತ್ತ, ಬಸ್‌ ನಿಲ್ದಾಣ, ರೋಟರಿ ವೃತ್ತದ ಮೂಲಕ ಹಾದು ಹೋದವು. ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪರದಾಟ ನಡೆಸಿದರು.

ಮೆರವಣಿಗೆಯು ಪಟ್ಟಣ ಪೊಲೀಸ್‌ ಠಾಣೆ ಬಳಿಯಿಂದ ಹಾದು ಹೋಗುವಾಗ ಹಿಂದೂ ಧರ್ಮೀಯರು ಬರಮಾಡಿಕೊಂಡು, ಹಬ್ಬದ ಶುಭ ಕೋರಿದರು. ಬಳಿಕ ಪರಸ್ಪರ ಕೈಗಳನ್ನು ಮೇಲಕ್ಕೆತ್ತಿ ಸೌಹಾರ್ದತೆ, ಭಾವೈಕ್ಯತೆ ಮೆರೆದರು.

ಅಂಜುಮನ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್‌ ರಫಾಯಿ, ಮಾಜಿ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ಮುಖಂಡರಾದ ಬಡಾವಲಿ, ಗೌಸ್‌, ಖಾಜಾ ಹುಸೇನ್‌ ನಿಯಾಜಿ ಮೊದಲಾದವರಿದ್ದರು.

ಶನಿವಾರವಷ್ಟೇ ಅಯೋಧ್ಯೆ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹಾದು ಹೋಗುವ ಮಾರ್ಗಗಳಲ್ಲಿ ಡಿ.ವೈ.ಎಸ್ಪಿ. ವಿ. ರಘುಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.