ADVERTISEMENT

ಬಳ್ಳಾರಿ | ಈದ್‌ ಸಂಭ್ರಮ: ಸ್ತಬ್ಧ ಚಿತ್ರ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:33 IST
Last Updated 6 ಸೆಪ್ಟೆಂಬರ್ 2025, 5:33 IST
ಈದ್‌ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಸೋಮವಾರ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ  
ಈದ್‌ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಸೋಮವಾರ ನಡೆದ ಸ್ತಬ್ಧ ಚಿತ್ರಗಳ ಮೆರವಣಿಗೆ     

ಬಳ್ಳಾರಿ: ಮುಸ್ಲಿಂ ಬಾಂಧವರು ಸಂಭ್ರಮ ಮತ್ತು ಸಡಗರದಿಂದ ಶುಕ್ರವಾರ ಈದ್  ಮಿಲಾದ್ ಆಚರಿಸಿದರು.

ಹಬ್ಬದ ನಿಮಿತ್ತ ನಗರದಲ್ಲಿ ಮುಹಮ್ಮದ್ ಪೈಗಂಬ‌ರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯುದ್ದಕ್ಕೂ ಪೈಗಂಬ‌ರ್ ಕುರಿತಾದ ಕವ್ವಾಲಿ ಹಾಡಲಾಯಿತು.

ಮೆರವಣಿಗೆಯಲ್ಲಿ ರಾಜಕೀಯದ ಮುಖಂಡರು ಸಹ ಪಾಲ್ಗೊಂಡು ಹಬ್ಬದ ಶುಭಾಶಯಗಳನ್ನು ಹೇಳಿದರು. ಮುಸ್ಲಿಂ ಬಾಂಧವರು ಕೂಡ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧೆಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ADVERTISEMENT

 ಇಸ್ಲಾಂ ಧರ್ಮದ ಪುಣ್ಯ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿನ ಮಂದಿರಗಳ ಮಾದರಿಗಳನ್ನು ತಯಾರಿಸಿ, ನಗರದ ವಿವಿಧೆಡೆ ಮೆರವಣಿಗೆ ನಡೆಸಿ, ಸಾಮೂಹಿಕವಾಗಿ ಭಕ್ತಿಗೀತೆ ಪ್ರಸ್ತುತಪಡಿಸಿದರು. ಮೆರವಣಿಗೆಯುದ್ದಕ್ಕೂ ಧರ್ಮ ಗುರುಗಳಿಂದ ಧಾರ್ಮಿಕ ಪಠಣ, ಭಕ್ತಿಗೀತೆಗಳ ಗಾಯನ ಗಮನ ಸೆಳೆಯಿತು.

ಯುವಕರು ನಗರದ ವಿವಿಧ ರಸ್ತೆಗಳಲ್ಲಿ ಸಂಜೆಯವರೆಗೂ ಬೈಕ್ ರ್‍ಯಾಲಿ ನಡೆಸಿ ಹಬ್ಬದ ಸಗಡರದಲ್ಲಿ ಪಾಲ್ಗೊಂಡರು. ಸ್ಥಳೀಯ ಹುಸೇನ್ ನಗರದಲ್ಲಿನ ಮಸೀದಿಯಲ್ಲಿ ಹಬ್ಬದ ಅಂಗವಾಗಿ ವಿಶೇಷ ಪಾರ್ಥನೆ ಸಲ್ಲಿಸಲಾಯಿತು. ಧರ್ಮಗುರುಗಳು ಆಶೀರ್ವಚನ ನೀಡಿ, ಸಮಾಜದ ಎಲ್ಲ ವರ್ಗದ ಜನರಿಗೆ ಸುಖ, ಶಾಂತಿ, ನೆಮ್ಮದಿ ದೊರೆಯಲಿ, ಸೌಹಾರ್ದ ವಾತಾವರಣ ಮುಂದುವರಿಯಲಿ ಎಂದು ಹರಸಿದರು.

ಮುಸ್ಲಿಂ ಸಮುದಾಯದ ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. 

ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಸೂಫಿ ಅಥವಾ ಬರೇಲ್ವಿ ಪಂಥದ ಮುಸ್ಲಿಮರು ಈದ್ ಮಿಲಾದ್ ಉನ್ ನಬಿ ಅಥವಾ  ಈದ್  ಎ ಮಿಲಾದ್  ಎಂದು ಆಚರಿಸುತ್ತಾರೆ. ಇದನ್ನು ಆಡು ಮಾತಿನಲ್ಲಿ ನಬಿದ್ ಮತ್ತು ಮೌಲಿದ್ ಎಂದೂ ಸಹ ಕರೆಯಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ 3ನೇ ತಿಂಗಳಾದ ರಬಿ ಅಲ್ ಅವ್ವಲ್ ಸಮಯದಲ್ಲಿ ಹಬ್ಬ ಆಚರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.