ADVERTISEMENT

ವಿಜಯನಗರದಲ್ಲಿ ಉಪಚುನಾವಣೆಯದ್ದೇ ಮಾತು

ಆನಂದ್‌ ಸಿಂಗ್‌ ಅನರ್ಹತೆ ಕೋರ್ಟ್‌ನಲ್ಲಿ ರದ್ದಾದರೂ ಚುನಾವಣೆ ನಡೆಯುವುದು ಖಚಿತ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಜುಲೈ 2019, 19:30 IST
Last Updated 29 ಜುಲೈ 2019, 19:30 IST
ದೀಪಕ್‌ ಕುಮಾರ್‌ ಸಿಂಗ್‌, ಜೆ.ಡಿ.ಎಸ್‌. ಮುಖಂಡ
ದೀಪಕ್‌ ಕುಮಾರ್‌ ಸಿಂಗ್‌, ಜೆ.ಡಿ.ಎಸ್‌. ಮುಖಂಡ   

ಹೊಸಪೇಟೆ: ಆನಂದ್‌ ಸಿಂಗ್‌ ಅವರನ್ನು ಶಾಸಕ ಸ್ಥಾನದಿಂದ ಸ್ಪೀಕರ್‌ ಅನರ್ಹಗೊಳಿಸುತ್ತಿದ್ದಂತೆ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆ ಕುರಿತ ಚರ್ಚೆಗಳು ಬಿರುಸು ಪಡೆದುಕೊಂಡಿವೆ.

ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಲೇ ಉಪಚುನಾವಣೆ ನಡೆಯಬಹುದು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ, ಅವರ ರಾಜೀನಾಮೆ ಅಂಗೀಕಾರಗೊಂಡಿರಲಿಲ್ಲ. ಈಗ ಸಿಂಗ್‌ ಅವರನ್ನು ಅನರ್ಹಗೊಳಿಸಲಾಗಿದೆ. ಒಂದುವೇಳೆ ಅನರ್ಹತೆ ಅಸಿಂಧು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದರೆ ಆಗ ರಾಜೀನಾಮೆ ಅಂಗೀಕಾರವಾಗಬಹುದು. ಆಗ ಉಪಚುನಾವಣೆ ನಡೆಸಲೇಬೇಕಾಗುತ್ತದೆ ಎನ್ನುವುದು ಸದ್ಯದ ಚರ್ಚೆಯ ವಿಷಯವಾಗಿದೆ.

ಒಂದುವೇಳೆ ಉಪಚುನಾವಣೆ ಘೋಷಣೆಯಾದರೆ ಯಾವ್ಯಾವ ಮುಖಂಡರು ಯಾವ್ಯಾವ ಪಕ್ಷದಿಂದ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಆನಂದ್‌ ಸಿಂಗ್‌ ರಾಜೀನಾಮೆ ಅಂಗೀಕಾರಗೊಂಡರೆ ಅವರು ಬಿಜೆಪಿ ಸೇರಿ ಸ್ಪರ್ಧಿಸಬಹುದು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಆದರೆ, ಈ ಕುರಿತು ಸಿಂಗ್‌ ಎಲ್ಲಿಯೂ ಹೇಳಿಕೊಂಡಿಲ್ಲ.

ADVERTISEMENT

ಚುನಾವಣೆಗೆ ಸಿದ್ಧತೆ

ಒಂದುವೇಳೆ ಸಿಂಗ್‌ ಬಿಜೆಪಿಗೆ ಬಂದರೆ ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಅವರ ವಿರುದ್ಧ ಸ್ಪರ್ಧಿಸಿದ್ದ ಎಚ್‌.ಆರ್‌.ಗವಿಯಪ್ಪ ಅವರ ನಡೆ ಏನಾಗಬಹುದು. ಅವರು ಕಾಂಗ್ರೆಸ್‌ ಸೇರಬಹುದೇ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯಬಹುದೇ ಎಂಬ ಪ್ರಶ್ನೆ ಮೂಡಿದೆ. ಸದ್ಯದ ಮಟ್ಟಿಗೆ ಪಕ್ಷದ ನಿರ್ಧಾರವನ್ನು ನೋಡಿಕೊಂಡು ಮುಂದುವರೆಯುವ ತೀರ್ಮಾನಕ್ಕೆ ಗವಿಯಪ್ಪ ಬಂದಿದ್ದಾರೆ.

ಹಿಂದಿನ ಚುನಾವಣೆಯಲ್ಲೇ ಕಡೆ ಗಳಿಗೆಯಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಜೆ.ಡಿ.ಎಸ್‌.ನಿಂದ ಸ್ಪರ್ಧಿಸಿದ್ದ ದೀಪಕ್‌ ಕುಮಾರ್‌ ಸಿಂಗ್‌ ಪುನಃ ಅಖಾಡಕ್ಕೆ ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆರು ತಿಂಗಳೊಳಗೆ ಚುನಾವಣೆ ನಡೆಯಬೇಕಿರುವುದರಿಂದ ಈಗಿನಿಂದಲೇ ಸಿದ್ಧತೆ ಕೂಡ ಶುರು ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ದೀಪಕ್‌ ಕುಮಾರ್‌ ಸಿಂಗ್‌ ಅವರೇ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಅಬ್ದುಲ್‌ ವಹಾಬ್‌ ಅವರ ಮಗ ಶಾದಾಬ್‌ ವಹಾಬ್‌, ಸಂತೋಷ್‌ ಲಾಡ್‌ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಬಿಜೆಪಿ ಟಿಕೆಟ್‌ಗಾಗಿ ಗವಿಯಪ್ಪ, ಕಿಶೋರ್‌ ಪತ್ತಿಕೊಂಡ, ಕವಿರಾಜ ಅರಸ್‌, ರಾಣಿ ಸಂಯುಕ್ತಾ ಅವರು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.ಯಾರಿಗೆ ಯಾವ ಪಕ್ಷದ ಟಿಕೆಟ್‌ ಸಿಕ್ಕರೂ ಹಳೆಯ ಮುಖಗಳೇ ಅದಲು ಬದಲಾಗಿ ಚುನಾವಣೆ ಅಖಾಡದಲ್ಲಿ ನಿಲ್ಲುವುದಂತೂ ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.