ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ (ರಾಬಕೊವಿ) ಒಕ್ಕೂಟದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಇಂದು (ಜುಲೈ 10) ಚುನಾವಣೆ ನಡೆಯಲಿದ್ದು, ಇಂದೇ ಫಲಿತಾಂಶವೂ ಹೊರಬೀಳಲಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಒಟ್ಟು ನಾಲ್ಕು ನಿರ್ದೇಶಕ ಸ್ಥಾನಗಳಿದ್ದರೆ, ರಾಯಚೂರು, ಕೊಪ್ಪಳಕ್ಕೆ ತಲಾ ನಾಲ್ಕು ನಿರ್ದೇಶಕ ಸ್ಥಾನಗಳು ಮೀಸಲಾಗಿವೆ. ಒಟ್ಟು ಮೂರು ಸ್ಥಾನಗಳು ಮಹಿಳೆಗೆ ಮೀಸಲಾಗಿವೆ. ಒಕ್ಕೂಟದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಂದ ಒಟ್ಟು 28 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಕ್ಷದ ಚಿಹ್ನೆಯ ಆಧಾರದಲ್ಲಿ ರಾಬಕೊವಿ ಚುನಾವಣೆ ನಡೆಯುವುದಿಲ್ಲವಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಸಿಂಡಿಕೇಟ್ ಮಾಡಿಕೊಂಡು ಚುನಾವಣೆಗೆ ಧುಮುಕಿವೆ. ಎರಡೂ ಪಕ್ಷಗಳಿಂದಲೂ ಆಯಾ ಜಿಲ್ಲೆಗಳಿಂದ ತಲಾ ನಾಲ್ವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ನಾಲ್ಕು ಜಿಲ್ಲೆಗಳಿಂದ ಒಟ್ಟು 466 ಸಂಘಗಳಿಗೆ ಮಾತ್ರವೇ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆ ಇದೆ. ವಿಜಯನಗರದಲ್ಲಿ 229 ಮತ, ಬಳ್ಳಾರಿ 28, ಕೊಪ್ಪಳ 154, ರಾಯಚೂರು 55 ಮತಗಳಿವೆ. ಅರ್ಹತೆ ಪಡೆದ ಸಂಘದಿಂದ ಮತಚಲಾಯಿಸಲು ಪ್ರತಿನಿಧಿಯೊಬ್ಬರನ್ನು ನಿಯೋಜಿಸಲಾಗಿದೆ. ಈ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಈ ಪ್ರತಿನಿಧಿಗಳು ಆಯಾ ಜಿಲ್ಲೆಯ ನಾಲ್ಕು ನಿರ್ದೇಶಕರನ್ನು (ಮಹಿಳಾ ಅಭ್ಯರ್ಥಿ ಸೇರಿ) ಆಯ್ಕೆ ಮಾಡಬೇಕಾಗುತ್ತದೆ. ಅತ್ಯಧಿಕ ಮತ ಪಡೆದ ಮೊದಲ ನಾಲ್ಕು ಮಂದಿಯನ್ನು ವಿಜೇತರನ್ನಾಗಿ ಘೋಷಿಸಲಾಗುತ್ತದೆ.
ಪ್ರಶ್ನೆಯಾಗಿಯೇ ಉಳಿದ ಬಳ್ಳಾರಿ ಅಸ್ಮಿತೆ: ಒಕ್ಕೂಟದ ವ್ಯಾಪ್ತಿಯ ರಾಯಚೂರು, ಕೊಪ್ಪಳಕ್ಕೆ ತಲಾ ನಾಲ್ಕು ಸ್ಥಾನಗಳು ನಿಗದಿಯಾಗಿದ್ದರೂ, ಬಳ್ಳಾರಿ ಮತ್ತು ವಿಜಯನಗರಕ್ಕೆ ಸೇರಿ ನಾಲ್ಕು ಸ್ಥಾನಗಳನ್ನು ಮಾತ್ರವೇ ನಿಗದಿ ಮಾಡಲಾಗಿದೆ. ವಿಜಯನಗರದಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲೇ ಅತ್ಯಧಿಕ ಮತವಿದ್ದರೆ, ಬಳ್ಳಾರಿಯಲ್ಲಿ ಅತ್ಯಂತ ಕಡಿಮೆ ಮತಗಳಿವೆ. ಹೀಗಾಗಿ ಬಳ್ಳಾರಿಯ ಸ್ಪರ್ಧಿಗಳು ಗೆಲ್ಲುವ ಸಾಧ್ಯತೆಗಳೇ ಇಲ್ಲ.
ಈ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ನಾಯಕರು ಪ್ರಯತ್ನ ನಡೆಸಿದ ಸಣ್ಣ ಕುರುಹುಗಳೂ ಕಾಣಿಸುತ್ತಿಲ್ಲ. ಎರಡೂ ಜಿಲ್ಲೆಗಳಿಂದ ಒಮ್ಮತದ ಅಭ್ಯರ್ಥಿಗಳನ್ನು ಹಾಕುವಲ್ಲಿ ಯಾರಾದರೂ ಒಬ್ಬೇ ಒಬ್ಬ ನಾಯಕರು ಪ್ರಯತ್ನ ಮಾಡಿಲ್ಲ. ಬಳ್ಳಾರಿಯ ಜನಪ್ರತಿನಿಧಿಗಳು ವಿಜಯನಗರದ ‘ಮುಖಂಡ’ರ ಎದುರು ಮಂಡಿಯೂರಿದಂತೆ ಚುನಾವಣಾ ಕಣ ಭಾಸವಾಗುತ್ತಿದೆ. ಇದರೊಂದಿಗೆ ಬಳ್ಳಾರಿಯ ಅಸ್ಮಿತೆಯನ್ನು ಇಲ್ಲಿನ ರಾಜಕಾರಣಿಗಳು ಮಣ್ಣುಪಾಲು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಬಳ್ಳಾರಿ(4): ಪಿ. ಜಗನ್ನಾಥ, ಕೆ. ಪ್ರತಾಪ ರೆಡ್ಡಿ, ಎಂ. ಸುದೀರ್, ಜಿ. ಚಂದ್ರಕಳಾ
ವಿಜಯನಗರ(8): ಐಗೋಳ ಚಿದಾನಂದ, ಪೂಜಾರ್ ಮಲ್ಲಿಕಾರ್ಜುನ, ಕೆ.ಭರಮ ರೆಡ್ಡಿ, ಎಲ್.ಬಿ.ಪಿ ಭೀಮಾನಾಯ್ಕ್, ಎಚ್. ಮರುಳಸಿದ್ದಪ್ಪ, ಬಿ. ಸಿದ್ದೇಶ್, ಜಿ. ನಾಗವೇಣಿ, ಎಚ್. ರತ್ನಮ್ಮ.
ಕೊಪ್ಪಳ(8): ಕೃಷ್ಣರೆಡ್ಡಿ ಗಲಬಿ, ಜಯತೀರ್ಥರಾವ್ ದೇಸಾಯಿ, ಮಂಜುನಾಥ, ವೆಂಕನಗೌಡ, ಶಿವಪ್ಪ ವಾದಿ, ಸತ್ಯನಾರಾಯಣ, ಕಮಲವ್ವ, ಕವಿತಾ
ರಾಯಚೂರು(8): ಅಮರಗುಂಡಪ್ಪ, ನಿಂಗಪ್ಪ, ಬಿ. ಪ್ರವೀಣಕುಮಾರ, ಭೀಮನಗೌಡ, ಎ. ರವೀಂದ್ರ, ಜಿ. ಸತ್ಯನಾರಾಯಣ, ಸಿ.ಎಚ್. ಕೃಷ್ಣವೇಣಿ, ಎನ್. ಸೀತಾರಾಮಲಕ್ಷ್ಮೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.