ADVERTISEMENT

ವಚನ ಸಾಹಿತ್ಯದಲ್ಲಿ ಸಮ ಸಮಾಜದ ಆಶಯ

ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭು ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 15:44 IST
Last Updated 15 ಜುಲೈ 2019, 15:44 IST
ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮೀಜಿ (ಎಡದಿಂದ ಮೂರನೆಯವರು), ಪ್ರಭು ಸ್ವಾಮೀಜಿ ಹಾಗೂ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು
ಕಾರ್ಯಕ್ರಮದಲ್ಲಿ ಗಂಗಾಧರ ಸ್ವಾಮೀಜಿ (ಎಡದಿಂದ ಮೂರನೆಯವರು), ಪ್ರಭು ಸ್ವಾಮೀಜಿ ಹಾಗೂ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು   

ಹೊಸಪೇಟೆ: ‘ಹನ್ನೆರಡನೇ ಶತಮಾನದಲ್ಲಿಬಸವಾದಿ ಶರಣರಿಂದ ರಚನೆಯಾದ ವಚನ ಸಾಹಿತ್ಯ ಸಮ ಸಮಾಜದ ಆಶಯ ಹೊಂದಿದೆ’ ಎಂದು ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭು ಸ್ವಾಮೀಜಿ ತಿಳಿಸಿದರು.

ವಚನ ಬಳಗದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ‘ವಚನೋತ್ಸವ’ ಹಾಗೂ ನಿವೃತ್ತ ಪ್ರಾಧ್ಯಾಪಕಿ ಎಚ್‌.ಸೌಭಾಗ್ಯಲಕ್ಷ್ಮಿ ಅವರ ‘ಶಿವಯೋಗಿ ಸಿದ್ಧರಾಮೇಶ್ವರ’, ‘ವಚನ ಬೆಳಕು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ವಚನ ಸಾಹಿತ್ಯ, ಲಿಂಗಾಯತ ಧರ್ಮ ಬಹಳ ವೈಚಾರಿಕತೆಯಿಂದ ಕೂಡಿದೆ. ವರ್ಣಭೇದ, ವರ್ಗಭೇದ ನಿರಾಕರಿಸಿವೆ. ಅಂತ್ಯಜ, ಕುಲಜ ಎನ್ನುವಂತಹದ್ದು ಇಲ್ಲ. ಸ್ತ್ರೀಪುರುಷರಲ್ಲಿ ಯಾವುದೇ ಭೇದ ಅದರಲ್ಲಿ ಇಲ್ಲ’ ಎಂದರು.

ADVERTISEMENT

‘ಯಾರೋ ನಿಂಬೆ ಹಣ್ಣಿನಿಂದ ಮಾಟ ಮಾಡಿದರೆ ಜನ ಸ್ವಾಮೀಜಿಗಳ ಬಳಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಅದರ ಬದಲು ಅದನ್ನು ಬಿಸಾಕಿದರೆ ಮುಗಿದು ಹೋಗುತ್ತದೆ. ಹೀಗೆ ಪ್ರತಿಯೊಂದನ್ನು ವೈಚಾರಿಕವಾಗಿ ನೋಡಬೇಕು. ಮೂಢನಂಬಿಕೆಗೆ ಶರಣಾಗಬಾರದು’ ಎಂದು ತಿಳಿಸಿದರು.

‘ವಚನ ಬಳಗವು ವಚನೋತ್ಸವ ಕಾರ್ಯಕ್ರಮದ ಮೂಲಕ ಮನೆ ಮನಗಳಿಗೆ ಜ್ಞಾನ ದೀಪ ಹಚ್ಚುತ್ತಿರುವುದು ಶ್ಲಾಘನಾರ್ಹ ಕೆಲಸ. ಇದು ನಿರಂತರವಾಗಿ ಹೀಗೆಯೇ ಮುಂದುವರಿಯಬೇಕು’ ಎಂದರು.

ಯಶವಂತನಗರ ಗುರು ಸಿದ್ಧರಾಮೇಶ್ವರ ಸಂಸ್ಥಾನ ಮಠದ ಗಂಗಾಧರ ಸ್ವಾಮೀಜಿ, ‘ಇಂದಿನ ಸಂಸತ್ತು, ವಿಧಾನಸಭೆಗೆ ಮೂಲ ಪ್ರೇರಣೆ ಹನ್ನೆರಡನೇ ಶತಮಾನದ ಅನುಭವ ಮಂಟಪ. ಅಂದಿನ ಕಾಲಘಟ್ಟದಲ್ಲಿ ಮುಕ್ತ ಚರ್ಚೆಗಳಿಗೆ ಅದು ವೇದಿಕೆಯಾಗಿತ್ತು. ಆ ರೀತಿಯ ಚರ್ಚೆಗಳು ಇಂದು ನಡೆಯಬೇಕಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕೆ. ರವೀಂದ್ರನಾಥ ಮಾತನಾಡಿ, ‘ಸೊಲ್ಲಾಪುರ ಸಿದ್ಧರಾಮೇಶ್ವರ ಮಠದ ಪೂಜಾರಿ ಅವರು ಪ್ರಕಟಿಸಿರುವ ಸಿದ್ಧರಾಮೇಶ್ವರ ಕುರಿತ ಕೃತಿಯಲ್ಲಿ ನಿಜವಾದ ಅಂಶಗಳಿಲ್ಲ. ಚರಿತ್ರೆಕಾರರು ಅದನ್ನೇ ನಿಜವೆಂದು ಭಾವಿಸಬಾರದು. ಸಿದ್ಧರಾಮೇಶ್ವರ ನೈಜ ಬದುಕಿನ ಮೇಲೆ ಲೇಖಕಿ ಸೌಭಾಗ್ಯಲಕ್ಷ್ಮಿ ಅವರು ಬೆಳಕು ಚೆಲ್ಲಿರುವುದು ಉತ್ತಮ ಕೆಲಸ’ ಎಂದು ಕೊಂಡಾಡಿದರು.

ಸಹಾಯಕ ಪ್ರಾಧ್ಯಾಪಕ ತಿಪ್ಪೇರುದ್ರ ಸಂಡೂರು, ಮುಖ್ಯಶಿಕ್ಷಕಿ ಆರ್‌.ಎಸ್‌. ಅಕ್ಕಮಹಾದೇವಿ, ಬಸವ ಕಿರಣ ಇದ್ದರು. ನಾಗಪುಷ್ಪಲತಾ, ನಾಗರಾಜ ಪತ್ತಾರ್‌, ಅನುರಾಧ ಪತ್ತಾರ್‌, ಕರುಣಾನಿಧಿ, ಎ. ಸುಜಾತ ಕರುಣಾನಿಧಿ, ಗೌತಮಿ, ಪುಷ್ಪ ಮಲ್ಲಿಕಾರ್ಜುನ, ಸುಜಾತ ಕೊಂಡನಾಯಕನಹಳ್ಳಿ, ಮಲ್ಲಿಕಾರ್ಜುನ ಟಿ. ತುರುವನೂರು, ಆದ್ಯ ಬಸವರಾಜ, ಯಲ್ಲಪ್ಪ ಭಂಡಾರಕರ್‌, ಉಮಾ ಮಹೇಶ್ವರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.