
ಬಳ್ಳಾರಿ: ‘ರಾಜ್ಯದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ತಿಗೆ ಸರ್ಕಾರ ₹ 700 ಕೋಟಿಗೂ ಹೆಚ್ಚು ಹಣ ನೀಡಿದೆ. ಇದರ ಜತೆಗೆ, ಇನ್ಫೊಸಿಸ್ ಸೇರಿ ಇತರ ಸಂಸ್ಥೆಗಳ ನೆರವು ಪಡೆಯಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
‘ಶಿಥಿಲ ಕಟ್ಟಡಗಳ ದುರಸ್ತಿ ಕಾರ್ಯವು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ವೇಗ ಪಡೆದಿದೆ. ಕಳೆದ ಬಾರಿ ಮಳೆ ಬಂದು ಕಟ್ಟಡಗಳು ಹಾಳಾಗಿವೆ. ಬಿಜೆಪಿಯವರು 8,200 ವಿವೇಕಾ ಕೊಠಡಿಗಳನ್ನು ಮಾಡುವುದಾಗಿ ಹೇಳಿ ಸಾವಿರಕ್ಕೆ ಮಾತ್ರ ಹಣ ಇಟ್ಟಿದ್ದರು. ಇನ್ನುಳಿದವಕ್ಕೆ ನಮ್ಮ ಸರ್ಕಾರ ಹಣ ಕೊಡಬೇಕಾಯಿತು’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಶಾಲಾ ಕೊಠಡಿಗಳು ಒಮ್ಮೆಲೇ ಶಿಥಿಲವಾಗಿಲ್ಲ. ಹಲವು ವರ್ಷಗಳ ಬಳಕೆ ಬಳಿಕ ಅವು ಶಿಥಿಲಗೊಂಡಿವೆ. ಅದರ ದುರಸ್ತಿ ಹೊಣೆ ನನ್ನ ಮೇಲಿದೆ. ಹಂತಹಂತವಾಗಿ ಎಲ್ಲವನ್ನೂ ಸರಿಪಡಿಸುವೆ’ ಎಂದರು.
‘ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ಮಾಧ್ಯಮಗಳಲ್ಲಿ ಮಾತ್ರವಿದೆ. ಆ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಬೇಕು. ಸಚಿವ ಸಂಪುಟ ವಿಸ್ತರಣೆಯೂ ಅಲ್ಲಿಯೇ ನಿರ್ಧಾರವಾಗಬೇಕು. ಸಚಿವ ಸ್ಥಾನಕ್ಕಾಗಿ ಆಕಾಂಕ್ಷೆ ಪಡುವುದು ತಪ್ಪಲ್ಲ. ಆದರೆ, ನಿರ್ಧಾರ ನಮ್ಮದಲ್ಲ’ ಎಂದು ಮಧು ಬಂಗಾರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.