ಹಗರಿಬೊಮ್ಮನಹಳ್ಳಿ: ರೈತ ಮಹಿಳೆಯೊಬ್ಬರ ಜಮೀನಿನಲ್ಲಿ ಮೆಕ್ಕೇಜೋಳ ಬಿತ್ತನೆ ಮಾಡಿ ವಾರದ ಮೇಲಾಗಿದ್ದರೂ ಸರಿಯಾಗಿ ಮೊಳಕೆ ಒಡೆದಿಲ್ಲ. ಇದರಿಂದಾಗಿ ರೈತರು ತೀವ್ರ ಆತಂಕಗೊಂಡಿದ್ದಾರೆ.
ತಾಲ್ಲೂಕಿನ ತಂಬ್ರಹಳ್ಳಿಯ ಗಡ್ಡಿ ವೀರಬಸಮ್ಮ ಅವರು ಗ್ರಾಮದ ಅಂಗಡಿಯೊಂದರಲ್ಲಿ ಮೆಕ್ಕೇಜೋಳ ಬಿತ್ತನೆ ಬೀಜ ಖರೀದಿಸಿ 2.85 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು.
ಆದರೆ, ಒಂದು ವಾರ ಮೇಲಾಗಿದ್ದರೂ ಸರಿಯಾಗಿ ಮೊಳಕೆ ಒಡೆಯದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಭೂಮಿಯನ್ನು ಉತ್ತಮವಾಗಿ ಹಸನು ಮಾಡಿ, ರಸಗೊಬ್ಬರದ ಜತೆಯಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೂ ಸರಿಯಾಗಿ ಮೊಳಕೆ ಒಡೆದಿಲ್ಲ. ಅಲ್ಲಲ್ಲಿ ಮೂಡಿದೆಯಾದರೂ ನಷ್ಟದ ದಾರಿ ತುಳಿಯಬೇಕಾದ ಸಂದರ್ಭ ಬರುತ್ತದೆ ಎಂದು ನೋವಿನಿಂದ ನುಡಿಯುತ್ತಾರೆ ರೈತ ಮಹಿಳೆಯ ಪುತ್ರ ಯುವರಾಜ ಗಡ್ಡಿ.
ವ್ಯವಸಾಯದ ಚುಟುವಟಿಕೆಗಳಿಗಾಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದೆ ₹1.42ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮೆಕ್ಕೇಜೋಳ ಬಿತ್ತನೆ ಮಾಡಿ ಉತ್ತಮ ಫಸಲು ಬರುತ್ತದೆ. ಬಂದ ಲಾಭದಲ್ಲಿ ಸಾಲವನ್ನು ಮರುಪಾವತಿ ಮಾಡುವ ಆಸೆ ಹೊತ್ತಿದ್ದ ರೈತರಿಗೆ ಈಗ ನಿರಾಶೆ ಮೂಡಿದೆ.
ಮತ್ತೆ ಸಾಲ ಮಾಡಿ ಸಾವಿರಾರು ರೂಪಾಯಿಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಈ ವರ್ಷದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೈತರಿಗೆ ಈಗ ಸಾಲದ ಹೊರೆಯಾಗುವ ಆತಂಕಗೊಂಡಿದ್ದಾರೆ.
ವಾರದಲ್ಲಿ ಬಿತ್ತನೆ ಮಾಡಿದ ಪ್ರದೇಶದಲ್ಲೆಲ್ಲಾ ಮೊಳಕೆ ಒಡೆಯಬೇಕಿತ್ತು, ಆದರೆ ಅಲ್ಲಲ್ಲಿ ಕೆಲ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ. ಈ ಬಿತ್ತನೆ ಬೀಜದ ಗುಣಮಟ್ಟದ ಕುರಿತು ಅನುಮಾನ ಮೂಡಿದೆ ಎಂದು ರೈತ ಮಹಿಳೆಯ ಪುತ್ರ ಯುವರಾಜ ಗಡ್ಡಿ ತಿಳಿಸಿದ್ದಾರೆ.
ನಕಲಿ ಬಿತ್ತನೆ ಬೀಜ ಮಾಡಿದ್ದರೆ ಅಂತಹ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗಾಗುವ ನಷ್ಟವನ್ನು ಮಾರಾಟಗಾರರು ಭರಿಸಬೇಕು. ನಕಲಿ ಬಿತ್ತನೆ ಬೀಜ ಎಂದು ಸಾಬೀತಾದಲ್ಲಿ ಅಂಥವರ ವಿರುದ್ಧ ಕ್ರಿಮಿನಿಲ್ ಮೊಕದ್ದಮೆ ದಾಖಲಿಸಬೇಕು.– ಟಿ.ರವಿಕುಮಾರ್, ರೈತ ಸಂಘದ ಮುಖಂಡ
ವರದಾಪುರ ಬಿತ್ತನೆ ಮಾಡಿದ ಬಳಿಕ ಮೊಳಕೆ ಒಡೆಯದಿದ್ದರೆ ಇದು ಯಾವ ಕಾರಣದಿಂದಾಗಿದೆ ಎನ್ನುವುದನ್ನು ಪರಿಶೀಲಿಸಲಾಗುವುದು ಬಿತ್ತನೆ ಬೀಜ ನಕಲಿ ಆಗಿದ್ದರೆ ಖರೀದಿಸಿದ ಸಮರ್ಪಕ ದಾಖಲೆ ಇದ್ದರೆ ಆ ಲಾಟ್‍ನಲ್ಲಿರುವ ಬೀಜ ಪರೀಕ್ಷಿಸಿ ಕ್ರಮ ತೆಗೆದುಕೊಳ್ಳಲಾಗುವುದು.– ಎಚ್.ಸುನಿಲ್‍ಕುಮಾರ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.