ADVERTISEMENT

ನಕಲಿ ರಶೀದಿ ಹಗರಣ: ಪಾಲಿಕೆ ದೂರು, ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 15:41 IST
Last Updated 12 ಡಿಸೆಂಬರ್ 2024, 15:41 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ಬಳ್ಳಾರಿ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ನಕಲಿ ರಶೀದಿ ಹಗರಣ ಸಂಬಂಧ ಪಾಲಿಕೆಯ ವಲಯ–1ರ ಆಯುಕ್ತರು ಗುರುವಾರ ಗಾಂಧಿನಗರ ಠಾಣೆಗೆ ಅಧಿಕೃತವಾಗಿ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. 

ವಲಯ–1ರ ಆಯುಕ್ತ ಗುರುರಾಜ್‌ ಸೌದಿ ನೀಡಿದ ದೂರು ಆಧರಿಸಿ  ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಮನೋಹರ್‌ ಅವರನ್ನು ಎ1 ಆರೋಪಿ ಮಾಡಲಾಗಿದೆ. ಇವರ ಜತೆಗೆ, ‘ಬಳ್ಳಾರಿ ಒನ್‌’ರ ಕುಮಾರ್‌, ಪಾಲಿಕೆಯ ಕರ ವಸೂಲಿಗಾರ ದೊಡ್ಡ ಬಸಪ್ಪ, ಸುರೇಶ್‌ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

ಆರೋಪಿಗಳು ‘ಸಾಯಿ ಸುಕೃತಿ ಹೋಮ್‌ ಅಪಾರ್ಟ್‌ಮೆಂಟ್‌’ ಮಾಲೀಕರಿಂದ ಆಸ್ತಿ ತೆರಿಗೆ ಹಣವನ್ನು ಪಡೆದುಕೊಂಡು, ನಕಲಿ ರಶೀದಿಗಳನ್ನು ಸೃಷ್ಟಿಸಿ, ಪಾಲಿಕೆಯ ನೋಂದಣಿಯಲ್ಲಿ ನಮೂದಿಸಿ, ಪಾಲಿಕೆ ಖಾತೆಗೆ ಹಣ ಜಮೇ ಮಾಡದೇ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ADVERTISEMENT

ಅಪಾರ್ಟ್‌ಮೆಂಟ್‌ ಮಾಲೀಕರು ತಮ್ಮ ಕಟ್ಟಡದ ತೆರಿಗೆ ₹2,80,179 ಹಣಕ್ಕೆ ಡಿ.ಡಿ ತಂದಿದ್ದರೂ, ಆರೋಪಿಗಳು ಸಬೂಬು ಹೇಳಿ ನಗದು ರೂಪದಲ್ಲೇ ಪಾವತಿ ಮಾಡುವಂತೆ ನೋಡಿಕೊಂಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

ಬಹುಕೋಟಿ ನಕಲಿ ರಶೀದಿ ಹಗರಣದಲ್ಲಿ ಪಾಲಿಕೆ ಈಗಾಗಲೇ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿತ್ತು. ಆದರೆ, ಕ್ರಿಮಿನಲ್‌ ಮೊಕದ್ದಮೆ ದಾಖಲಿಸದೆಯೇ ಸಿಬ್ಬಂದಿಯನ್ನು ಅಮಾನತು ಮಾಡಿದ ಪಾಲಿಕೆ ಅಧಿಕಾರಿಗಳ ನಡೆಗೆ ಆಕ್ಷೇಪ ವ್ಯಕ್ತವಾಗಿತ್ತು. ಹೀಗಿರುವಾಗಲೇ ಪಾಲಿಕೆಯಿಂದಲೇ ಗುರುವಾರ ದೂರು ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.