ಕಂಪ್ಲಿ ಸೋಮೇಶ್ವರ ಬಡಾವಣೆಯಲ್ಲಿರುವ ಮಹಿಳೆಯರ ಶೌಚಾಲಯ ಕಟ್ಟಡ ದುರಸ್ತಿ ಇಲ್ಲದೆ ಪಾಳು ಬಿದ್ದಿರುವುದು
ಕಂಪ್ಲಿ: ‘ಪಟ್ಟಣದ ಹೃದಯ ಭಾಗದ ಐತಿಹಾಸಿಕ ಸೋಮಪ್ಪ ಕೆರೆ ಅಂಗಳದಲ್ಲಿ ತಲೆಮಾರುಗಳಿಂದ ವಾಸವಾಗಿದ್ದ ಸುಮಾರು 300ಕುಟುಂಬಗಳನ್ನು ಪಟ್ಟಣದ ಚಿಕ್ಕಜಾಯಿಗನೂರು ರಸ್ತೆ ಪಕ್ಕದ ಖಾಲಿ ನಿವೇಶನಕ್ಕೆ ಪುರಸಭೆ ದಶಕಗಳ ಹಿಂದೆ ಸ್ಥಳಾಂತರಿಸಿ 23ನೇ ವಾರ್ಡ್ ಸೋಮೇಶ್ವರ ಬಡವಾಣೆ ಎಂದು ನಾಮಕರಣ ಮಾಡಿದೆ. ಆದರೆ, ಅಲ್ಲಿ ನೆಲೆಸಿದ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಕಡೆಗಣಿಸಲಾಗಿದ್ದು ಇಂದು ಕುಟುಂಬಗಳ ಬದುಕು ‘ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ’ ಎಂಬ ಆರೋಪ ಕೇಳಿ ಬಂದಿದೆ.
ಪ್ರಮುಖವಾಗಿ, ಮಹಿಳೆಯರ ಶೌಚಾಲಯ ದುರಸ್ತಿ ಇಲ್ಲದೆ ಹಾಳಾಗಿದ್ದು, ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯಸ್ತದ ನಂತರ ಬಯಲು ಪ್ರದೇಶವನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಹಾಳಾಗಿರುವ ಮಹಿಳಾ ಶೌಚಾಲಯ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವಿದ್ದು, ಅದರ ಮುಂಭಾಗದ ಬಯಲಿನಲ್ಲಿಯೇ ಕೆಲವರು ಶೌಚಾ ಮಾಡಿ ಮಲಿನ ಮಾಡುತ್ತಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿ ಮೂರು ವರ್ಷಗಳೇ ಕಳೆದಿವೆ. ಹಲವು ತಿಂಗಳಿಂದ ಚರಂಡಿ ತುಂಬಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಹಾವಳಿ ವಿಪರೀತವಾಗಿರುವುದರಿಂದ ಸಂಜೆಯಾಗುತ್ತಿದ್ದಂತೆ ಯಾರು ಮನೆಯಿಂದ ಹೊರಗಡೆ ಬಾರದಂತಾಗಿದೆ. ವಾಸದ ಮನೆಗಳ ಸುತ್ತಲು ಭತ್ತದ ಗದ್ದೆಗಳಿರುವುದರಿಂದ ಬಡಾವಣೆ ದ್ವೀಪ ಪ್ರದೇಶದಂತೆ ಇದ್ದು, ವಿಷಜಂತುಗಳ ಹಾವಳಿ ಮೇರೆ ಮೇರುತ್ತಿದೆ. ಅಂಗನವಾಡಿ ಕೇಂದ್ರದ ಮುಂದೆ ಉದ್ಯಾನವಿದೆಯಾದರೂ ಅಭಿವೃದ್ಧಿಯಾಗಿಲ್ಲ. ಮುಳ್ಳು ಗಂಟಿ ಬೆಳೆದಿದೆ. ಅಂಗನವಾಡಿ ಬಳಿಯ ಝಂಡಾ ಕಟ್ಟೆ ಬಳಿ ಕಿರು ನೀರು ಪೂರೈಕೆ ಟ್ಯಾಂಕ್ ಇದ್ದು, ದುರಸ್ತಿ ಇಲ್ಲದೆ ಪಾಳು ಬಿದ್ದಿದೆ.
ಇಲ್ಲಿ ನೆಲೆಸಿರುವ ಎಲ್ಲ ಕುಟುಂಬಗಳು ಕೂಲಿ ಮಾಡಿ ದೈನಂದಿನ ಜೀವನ ನಡೆಸುತ್ತಿದ್ದಾರೆ.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ, ಇನ್ನು ಕೆಲವರು ಮನೆ, ನಿವೇಶನಕ್ಕೆ ಅರ್ಜಿ ಸಲ್ಲಿಸಿ ರೋಸಿ ಹೋಗಿದ್ದಾರೆ. ಶುದ್ಧ ಕುಡಿಯುವ ನೀರಿಗಾಗಿ ಒಂದೂವರೆ ಕಿ.ಮೀ ದೂರದ ಸಕ್ಕರೆ ಕಾರ್ಖಾನೆ ಬಳಿಗೆ ಹೋಗಬೇಕಾಗಿದೆ. ಅದೇ ರೀತಿ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳು ನಿತ್ಯ ಒಂದೂವರೆ ಕಿ.ಮೀ ಕ್ರಮಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಆವರಣ ಗೋಡೆ ಇಲ್ಲದ ಕಾರಣ ಸುತ್ತಲು ಕೊಳಕು ವಾತಾವರಣವಿದೆ.
ಸ್ಥಳೀಯ ಚುನಾವಣೆ ಬಂದಾಗ ಅಭ್ಯರ್ಥಿಗಳು ಕೈಮುಗಿದು ಕಾಲಿಗೆ ಬಿದ್ದು, ಮತ ಪಡೆದು ಗೆದ್ದ ಬಳಿಕ ನಮ್ಮನ್ನು ಮರೆತು ಬಿಡುತ್ತಾರೆ ಎಂದು ನಿವಾಸಿಗಳು ಆರೋಪಿಸಿದರು.
ಸ್ಥಳಾಂತರ ನಂತರ 234ಜನರಿಗೆ ನಿವೇಶನ ಹಕ್ಕು ಪತ್ರ ಪುರಸಭೆ ನೀಡಿದೆ. ಬಾಕಿ 16ಹಕ್ಕುಪತ್ರ ಇನ್ನು ಅತಂತ್ರ ಸ್ಥಿತಿಯಲ್ಲಿವೆ.
ನಮ್ಮ ದೈನಂದಿನ ಜೀವನಕ್ಕೆ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಪುರಸಭೆ ಆಡಳಿತ ಮಂಡಳಿಗೆ ಅನೇಕ ಬಾರಿ ಮನವಿ ಮಾಡಿದರು ‘ನರಿ ಕೂಗು ಗಿರಿ ಮುಟ್ಟಿತೇ’ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದು ಅಲ್ಲಿಯ ನಿವಾಸಿಗಳು ಬೇಸರದಿಂದ ತಿಳಿಸುತ್ತಾರೆ.
ಮಹಿಳೆಯರ ಶೌಚಾಲಯ ಕಟ್ಟಡ ಸರಿಪಡಿಸಿ, ಮಹಿಳೆಯರ ಮರ್ಯಾದೆ ಕಾಪಾಡಿ. ವಾರ್ಡ್‍ನಲ್ಲಿ ಈ ವರ್ಷವಾದರೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿ.ಬಿ. ಅಖ್ತರ್‌ಬೀ
ನಾಲ್ಕು ತಿಂಗಳಿಂದ ಗಟಾರ ದುರ್ವಾಸನೆಗೆ ಆರೋಗ್ಯ ಹಾಳಾಗಿದೆ. ಫಾಗಿಂಗ್ ಮರೀಚಿಕೆ ಯಾಗಿದೆ. ಸೊಳ್ಳೆ ಕಡಿತದಿಂದ ಅನಾರೋಗ್ಯ ಸಾಮಾನ್ಯವಾಗಿದೆ.ನಾಯಕರ ಗಂಗಮ್ಮ
ಸ್ಥಳಾಂತರ ನಂತರ ವಾರ್ಡ್‌ನ ವಯೋವೃದ್ಧರು, ಎರಡೂವರೆ ಕಿ.ಮೀ ದೂರದ ಅಂಚೆ ಕಚೇರಿಗೆ ತೆರಳಿ ಪಿಂಚಣಿ ತರಬೇಕಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರಿಗಾದರೂ ಮನೆಗೆ ಬಂದು ಪಿಂಚಣಿ ನೀಡುವ ವ್ಯವಸ್ಥೆ ಮಾಡಿ.ಉಳಿಗಾದರ ಜಯಮ್ಮ
ಪುನರ್ವಸತಿ ವಾರ್ಡಿನಲ್ಲಿ ನೆಲೆಸಿರುವ 45 ಜನರಿಗೆ ಎರಡು ತಿಂಗಳಲ್ಲಿ ನಿವೇಶನ ಪಟ್ಟಾ ನೀಡಲಾಗುವುದು. ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು.ಹೂಗಾರ್ ರಮೇಶ್, ವಾರ್ಡ್ ಸದಸ್ಯ
ಸ್ಥಳಾಂತರವಾಗಿರುವ ಸೋಮೇಶ್ವರ ಬಡಾವಣೆ ಅಭಿವೃದ್ಧಿ ಕುರಿತು ಫೆ.18ರಂದು ನಡೆಯುವ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಮೂಲಸೌಕರ್ಯಗಳಿಗೆ ಶಾಸಕರಿಂದ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು.ಭಟ್ಟ ಪ್ರಸಾದ್, ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.