ADVERTISEMENT

ಕೈಹಿಡಿದ ಮಸಾಲ ಕಿರು ಉದ್ಯಮ

ವಾಗೀಶ ಕುರುಗೋಡು
Published 11 ಸೆಪ್ಟೆಂಬರ್ 2019, 19:30 IST
Last Updated 11 ಸೆಪ್ಟೆಂಬರ್ 2019, 19:30 IST
ಆನಂದ ಸಿದ್ರಾಮಪ್ಪ ಅವರ ಮನೆಯಲ್ಲಿ ಮಸಾಲ ಪದಾರ್ಥಗಳನ್ನು ಪ್ಯಾಕ್‌ ಮಾಡುತ್ತಿರುವ ಮಹಿಳೆಯರು–ಪ್ರಜಾಔಆಣಿ ಚಿತ್ರ
ಆನಂದ ಸಿದ್ರಾಮಪ್ಪ ಅವರ ಮನೆಯಲ್ಲಿ ಮಸಾಲ ಪದಾರ್ಥಗಳನ್ನು ಪ್ಯಾಕ್‌ ಮಾಡುತ್ತಿರುವ ಮಹಿಳೆಯರು–ಪ್ರಜಾಔಆಣಿ ಚಿತ್ರ   

ಕುರುಗೋಡು: ಕೃಷಿಯಲ್ಲಿ ಕೈ ಸುಟ್ಟುಕೊಂಡಿದ್ದ ರೈತನಿಗ ಮಸಾಲ ಪದಾರ್ಥಗಳ ಕಿರು ಉದ್ಯಮ ಪ್ರಾರಂಭಿಸಿ ಅದರಲ್ಲಿ ಯಶ ಕಂಡುಕೊಂಡಿದ್ದಾರೆ.

ಪಟ್ಟಣದ ಬಾದನಹಟ್ಟಿ ರಸ್ತೆಯ ಆನಂದ ಸಿದ್ರಾಮಪ್ಪ ಕೃಷಿಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಮಸಾಲ ಪದಾರ್ಥಗಳ ಮಾರಾಟಕ್ಕೆ ಸೋದರ ಸಂಬಂಧಿ ಸಲಹೆ ನೀಡಿದರು. ಅದನ್ನೇಕೆ ಪ್ರಯತ್ನಿಸಿ ನೋಡಬಾರದು ಎಂದು ಕೆಲಸ ಆರಂಭಿಸಿದರು. ಉತ್ತಮ ಯಶಸ್ಸು ಸಿಕ್ಕ ಕಾರಣ ಈಗ ಅದರಲ್ಲಿಯೇ ಮುಂದುವರೆದಿದ್ದಾರೆ.

‘ಪೂಜಾ ಹೋಮ್‌ ಪ್ರಾಡಕ್ಟ್ಸ್‌’ ಹೆಸರಿನಲ್ಲಿ ಕಿರು ಉದ್ಯಮ ಆರಂಭಿಸಿ, ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ಇವರ ವ್ಯವಹಾರ ಜಿಲ್ಲೆ ಸೇರಿದಂತೆ ನೆರೆಯ ಕೊಪ್ಪಳ, ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆ ವರೆಗೆ ವಿಸ್ತರಿಸಿದೆ.

ADVERTISEMENT

₹50 ಸಾವಿರ ಬಂಡವಾಳದೊಂದಿಗೆ ಉದ್ಯಮ ಆರಂಭಿಸಿದ ಆನಂದ ಅವರು, ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.ನೇರವಾಗಿ ರೈತರ ಬಳಿಯೇ ಹೋಗಿ ಕ್ವಿಂಟಾಲ್‌ ಗಟ್ಟಲೇ ಮಸಾಲ ಪದಾರ್ಥಗಳನ್ನು ಖರೀದಿಸುತ್ತಾರೆ. ಕಾಳು ಮೆಣಸು, ಚಕ್ಕೆ, ಜೀರಿಗೆ, ಸಾಸಿವೆ, ಸೊಂಟಿ, ಗಸಗಸೆ, ಅಜ್ಜವಾನ, ಸೋಂಪು, ಅಡುಗೆ ಸೋಡಾ, ಕುಂಕುಮ, ಅರಿಶಿಣ, ಒಣದ್ರಾಕ್ಷಿ, ಗೋಡಂಬಿ ಪುಡಿ ಸೇರಿದಂತೆ ತರಹೇವಾರಿ ವಸ್ತುಗಳು ಇವರ ಬಳಿ ಸಿಗುತ್ತವೆ.

‘ಆರಂಭದಲ್ಲಿ ನಾನು, ನನ್ನ ಪತ್ನಿ ಮತ್ತು ತಾಯಿ ಸೇರಿಕೊಂಡು ಕೆಲಸ ಮಾಡುತ್ತಿದ್ದೆವು. ದಿನದಿಂದ ದಿನಕ್ಕೆ ಕೆಲಸ ಹೆಚ್ಚಾಗಿದ್ದರಿಂದ 20 ಮಹಿಳೆಯರನ್ನು ಕೆಲಸಕ್ಕೆ ಇಟ್ಟುಕೊಂಡಿರುವೆ. ವಾರ್ಷಿಕ ₹30 ಲಕ್ಷದ ವರೆಗೆ ವ್ಯವಹಾರ ನಡೆಯುತ್ತಿದೆ. ಈಗ ನಮ್ಮದೇ ಸ್ವಂತ ಕಟ್ಟಡ ಇದೆ. ಶುಚಿತ್ವ, ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡುವುದರಿಂದ ಎಲ್ಲರೂ ಭರವಸೆಯಿಂದ ನಮ್ಮ ಬಳಿ ಖರೀದಿಸುತ್ತಾರೆ’ ಎಂದು ಆನಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.