ಹರಪನಹಳ್ಳಿ ತಾಲ್ಲೂಕು ಮಾಚಿಹಳ್ಳಿಯಲ್ಲಿ ಜೆಸಿಬಿ ಯಂತ್ರದ ಮೂಲಕ ಬೆಳೆ ನಾಶ ಪಡಿಸುತ್ತಿರುವುದು.
ಹರಪನಹಳ್ಳಿ: ತಾಲ್ಲೂಕಿನ ಮಾಚಿಹಳ್ಳಿ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಬಿತ್ತನೆ ಮಾಡಲಾಗಿದೆ ಎಂದು ಗುರುತಿಸಿದ ಅಧಿಕಾರಿಗಳು ಬೆಳೆ ನಾಶಪಡಿಸಿ ಅರಣ್ಯ ಸಸಿ ನೆಟ್ಟರು. ಇದೇ ವೇಳೆ, ನಮ್ಮ ಭೂಮಿಗೆ ಪಟ್ಟಾ ಇದೆ ಎಂದು ಕೆಲ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ಜರುಗಿತು.
ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಸ್.ಪಿ.ಲಿಂಬ್ಯನಾಯ್ಕ ಮಾತನಾಡಿ, ಸರ್ವೆ ನಂಬರ್ 31 ಮತ್ತು 382 ರಲ್ಲಿ ಪಟ್ಟಾ ಕೊಟ್ಟಿರುವ ಜಮೀನಿನಲ್ಲಿ ರೈತರು ಬಿತ್ತನೆ ಮಾಡಿಕೊಂಡಿದ್ದರು. ಎರಡು ತಿಂಗಳ ಬೆಳೆ ಎದೆ ಉದ್ದ ಬೆಳೆದು ನಿಂತಿತ್ತು. ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ 14 ಜೆಸಿಬಿ ಯಂತ್ರ ಬಳಸಿ ನಾಶಪಡಿಸಿದ್ದಾರೆ ಎಂದು ದೂರಿದರು.
ರೈತ ಮಹಿಳೆಯರಾದ ಲೋಕಮ್ಮ ಮತ್ತು ದುರುಗಮ್ಮ ಅವರು ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದ್ರನಾಯ್ಕ , ಸೋಮ್ಲಿಬಾಯಿ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದರು. ರೈತರ ಭೂಮಿ ಬಿಟ್ಟು ಕೊಡಬೇಕು, ಬೆಳೆ ನಾಶಪಡಿಸಿದ್ದಕ್ಕೆ ಪರಿಹಾರ ನೀಡಬೇಕು, ಹಲ್ಲೆ ಮಾಡಿದ ಸಿಬ್ಬಂದಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಮಾತನಾಡಿ, ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿ ಅತಿಕ್ರಮಣ ಮಾಡಲಾಗಿದೆ. ಅದನ್ನು ಗುರುತಿಸಿ ಅಲ್ಲಿ ಸಾವಿರಾರು ಸಸಿ ನೆಡಲಾಗಿದೆ ಎಂದು ಪ್ರತಿಕ್ರಿಯಿಸಿದರು.
ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.