ADVERTISEMENT

ರೈತರಿಂದ ಮೂರು ಗಂಟೆ ರಸ್ತೆತಡೆ

ಹಂಪಿ ಪ್ರವಾಸಿಗರಿಗೆ ಮುಟ್ಟಿದ ಬಿಸಿ; ಸುತ್ತು ಬಳಸಿ ಸಂಚರಿಸಿದ ವಾಹನಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 11:27 IST
Last Updated 6 ಫೆಬ್ರುವರಿ 2021, 11:27 IST
ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಹೊಸಪೇಟೆಯ ಅನಂತಶಯನಗುಡಿ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು
ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಹೊಸಪೇಟೆಯ ಅನಂತಶಯನಗುಡಿ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ಶನಿವಾರ ನಡೆದ ಹೆದ್ದಾರಿ ತಡೆ ಚಳವಳಿಗೆ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಮುದಾಯ ಸಂಘಟನೆ, ಸಿಪಿಐಎಂ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತರು ರೈತರ ಹೋರಾಟ ಬೆಂಬಲಿಸಿ ಅನಂತಶಯನಗುಡಿ ಬಳಿ ಹೊಸಪೇಟೆ–ಕಂಪ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ನಿಗದಿಯಂತೆ ಮಧ್ಯಾಹ್ನ 12ಕ್ಕೆ ಆರಂಭಗೊಂಡ ರಸ್ತೆತಡೆ ಚಳವಳಿ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯಿತು. ಹೆದ್ದಾರಿ ಮಧ್ಯದಲ್ಲಿ ಕುಳಿತು, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಷಾ, ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿದರು.

ADVERTISEMENT

ಸತತ ಮೂರು ಗಂಟೆ ರಸ್ತೆತಡೆ ನಡೆಸಿದ್ದರಿಂದ ಹಂಪಿಗೆ ಹೋಗಬೇಕಿದ್ದ ಪ್ರವಾಸಿಗರಿಗೆ ಬಿಸಿ ತಟ್ಟಿತು. ಕಂಪ್ಲಿ, ಗಂಗಾವತಿ, ರಾಯಚೂರು, ಮಂತ್ರಾಲಯ ಕಡೆಗೆ ತೆರಳಬೇಕಿದ್ದವರು ಸುತ್ತು ಬಳಸಿ ಸಂಚರಿಸಬೇಕಾಯಿತು. ಪೊಲೀಸರು ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ (ಎಚ್ಎಲ್‌ಸಿ) ಬಳಿ ಸಂಪರ್ಕಿಸುವ ವರ್ತುಲ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ಒಳಬಿಡಲಿಲ್ಲ. ಅದೇ ರೀತಿ ಹಂಪಿ ರಸ್ತೆಯ ಮುಖೇನ ಕಂಪ್ಲಿ ಕಡೆಗೆ ಹೋಗುವ ಮಾರ್ಗವೂ ಬಂದ್‌ ಮಾಡಿದ್ದರು. ಇದರಿಂದಾಗಿ ವಾಹನಗಳು ನಗರದ ಒಳಭಾಗದಿಂದ ಬೇರೆ ಕಡೆ ಸಂಚರಿಸಿದವು. ಮಧ್ಯಾಹ್ನ ಕೆಲಹೊತ್ತು ವಾಹನ ದಟ್ಟಣೆ ಉಂಟಾಗಿತ್ತು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ, ‘ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನವದೆಹಲಿಯಲ್ಲಿ ರೈತರು ಎರಡು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಮಳೆ, ಚಳಿ ಲೆಕ್ಕಿಸದೆ ಹೋರಾಟ ನಡೆಸುತ್ತಿರುವ ಹೋರಾಟಗಾರರಲ್ಲಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದೆ ಹಠಮಾರಿ ಧೋರಣೆ ತಾಳಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಮೊಂಡುತನ ತೋರುವುದನ್ನು ಬಿಡಬೇಕು. ರೈತರೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬೇಕು. ರೈತರನ್ನು ಭಯೋತ್ಪಾದಕರಂತೆ ಬಿಂಬಿಸಲು ಹೊರಟಿರುವುದು ಖಂಡನಾರ್ಹ. ರೈತರ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೃಷಿ ಕಾಯ್ದೆ ರದ್ದುಪಡಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ರೈತರ ಹೋರಾಟವೂ ಸ್ವಾತಂತ್ರ್ಯ ಚಳವಳಿಯ ಹೋರಾಟದಂತೆ ಎಲ್ಲೆಡೆ ಹರಡುತ್ತಿದೆ. ಎಲ್ಲ ವಲಯದವರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ವಿರಮಿಸುವ ಪ್ರಶ್ನೆಯೇ ಇಲ್ಲ. ಈ ಹೋರಾಟದಲ್ಲಿ ನಮ್ಮ ಜೀವ ಹೋದರೂ ಹೋಗಬಹುದು ಎಂದು ಕುಟುಂಬದವರಿಗೆ ತಿಳಿಸಿಯೇ ಚಳವಳಿಕೆ ದುಮುಕಿದ್ದೇವೆ’ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ‘ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಅದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಅನ್ನದ ವಿಷಯವಾಗಿರುವುದರಿಂದ ಅನ್ನದಾತರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ, ಅವರಿಗೆ ಉಗ್ರರು ಎಂದು ಅಪಮಾನಿಸುತ್ತಿರುವುದು ಸರಿಯಲ್ಲ’ ಎಂದರು.

ರೈತ ಸಂಘದ ಖಾಜಾ ಹುಸೇನ್‌ ನಿಯಾಜಿ, ಘಂಟೆ ಸೋಮಶೇಖರ್‌, ಸಿಪಿಐಎಂನ ಎನ್‌. ಯಲ್ಲಾಲಿಂಗ, ಮರಡಿ ಜಂಬಯ್ಯ ನಾಯಕ, ಬಿಸಾಟಿ ಮಹೇಶ್‌, ಅಂಗನವಾಡಿ ಸಂಘದ ನಾಗರತ್ನಮ್ಮ,ಮುಖಂಡರಾದ ಎಚ್. ಶಬ್ಬೀರ್, ದುರುಗಪ್ಪ ಪೂಜಾರ‌ ಹಾಗೂ ರೈತರು ಇದ್ದರು.

ವ್ಯಕ್ತಿ ವಶಕ್ಕೆ

ವ್ಯಕ್ತಿಯೊಬ್ಬರು ರೈತರ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ, ಅವರನ್ನು ನಿಂದಿಸಲು ಮುಂದಾದಾಗ ಪೊಲೀಸರು ಅಲ್ಲಿಂದ ದೂರ ಕಳಿಸಿ, ವಾತಾವರಣ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.