ADVERTISEMENT

‘ಅರಣ್ಯ ಇಲಾಖೆಯ ದೌರ್ಜನ್ಯ ತಡೆಯಿರಿ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 13:38 IST
Last Updated 16 ಜನವರಿ 2019, 13:38 IST
ಹೊಸಪೇಟೆಯಲ್ಲಿ ಬುಧವಾರ ರೈತರೊಂದಿಗೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಬುಧವಾರ ರೈತರೊಂದಿಗೆ ನಡೆದ ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಕಾಡಂಚಿನ ರೈತರ ಮೇಲೆ ಅರಣ್ಯ ಇಲಾಖೆಯವರು ನಡೆಸುತ್ತಿರುವದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬುಧವಾರ ಇಲ್ಲಿ ನಡೆದ ಸಾಗುವಳಿದಾರರ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮರಿಯಮ್ಮನಹಳ್ಳಿ ಲೋಕೇಶ್‌ ಮಾತನಾಡಿ, ‘ಕಾಡಂಚಿನ ರೈತರು ಅಕ್ರಮ–ಸಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಹಿಂಬರಹ ಕೂಡ ಅಧಿಕಾರಿಗಳು ಬರೆದು ಕೊಟ್ಟಿಲ್ಲ. ಇನ್ನೊಂದೆಡೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾನೂನಿನ ನೆಪವೊಡ್ಡಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ದೂರಿದರು.

‘ಕೈಗಾರಿಕೆಗಳ ಸ್ಥಾಪನೆಗೆ ಅರ್ಜಿ ಸಲ್ಲಿಸಿದರೆ ತಕ್ಷಣವೇ ಭೂಮಿ ಮಂಜೂರಾಗುತ್ತದೆ. ಆದರೆ, ಅನೇಕ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರನ್ನು ಕಡೆಗಣಿಸಲಾಗುತ್ತಿದೆ’ ಎಂದು ನೋವು ತೋಡಿಕೊಂಡರು.

ADVERTISEMENT

ಸಂಘದ ರಾಜ್ಯ ಅಧ್ಯಕ್ಷ ಬಿ. ರಾಜಶೇಖರಗೌಡ ಮಾತನಾಡಿ, ‘ರಾಜ್ಯದ ಹಲವು ಕಡೆಗಳಲ್ಲಿ ರೈತರಿಗೆ ಪಟ್ಟಾ ಕೊಡಲಾಗಿದೆ. ಆದರೆ, ತಾಲ್ಲೂಕಿನಲ್ಲಿ ಪಟ್ಟಾ ಕೊಡಲು ಹಿಂದೇಟು ಹಾಕಲಾಗುತ್ತಿದೆ. ಮೇಲಿಂದ ಮೇಲೆ ಅರಣ್ಯ ಅಧಿಕಾರಿಗಳ ಕಿರಿಕಿರಿಯಿಂದ ರೈತರು ಬೇಸತ್ತು ಹೋಗಿದ್ದಾರೆ’ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಪ್ರತಿಕ್ರಿಯಿಸಿ, ‘ಕಾಡಂಚಿನಲ್ಲಿ ಉಳುಮೆ ಮಾಡುವವರ ಬಗ್ಗೆ ಗ್ರಾಮ ಅರಣ್ಯ ಸಮಿತಿಯಲ್ಲಿ ನಿರ್ಧಾರವಾಗಬೇಕು. ರೈತರ ಗಮನಕ್ಕೆ ತಂದು ಜಂಟಿ ಸರ್ವೇ ನಡೆಸಲಾಗುವುದು. ಕಾಲುವೆ, ಕೆರೆ, ಸ್ಮಶಾನಕ್ಕೆ ಸೇರಿದ ಜಾಗವಿದ್ದರೆ ಹಕ್ಕು ಪತ್ರ ನೀಡಲು ಬರುವುದಿಲ್ಲ. ರೈತರಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ಭರವಸೆ ನೀಡಿದರು.

ಉಪ ತಹಶೀಲ್ದಾರ್‌ ರಮೇಶ ನಾಯ್ಕ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿದಾನಂದ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಹನುಮಂತಪ್ಪ, ತಾಲ್ಲೂಕು ಅಧ್ಯಕ್ಷ ಟಿ.ಹುಲುಗಪ್ಪ, ನಾಯಕರ ಭೀಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.