ADVERTISEMENT

ಕಂಪ್ಲಿ: ಅಂತಿಮಗೊಳ್ಳದ ಭತ್ತ ಕೊಯ್ಲು ಯಂತ್ರ ಬಾಡಿಗೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:38 IST
Last Updated 25 ನವೆಂಬರ್ 2024, 15:38 IST
ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್. ಶಿವರಾಜ, ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆ ಸೋಮವಾರ ನಡೆಯಿತು 
ಕಂಪ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್. ಶಿವರಾಜ, ಕೃಷಿ ಅಧಿಕಾರಿಗಳ ನೇತೃತ್ವದಲ್ಲಿ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆ ಸೋಮವಾರ ನಡೆಯಿತು    

ಕಂಪ್ಲಿ: ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಹಾರ್ವೆಸ್ಟರ್(ಭತ್ತ ಕೊಯ್ಲು ಯಂತ್ರ) ಮಾಲೀಕರ, ರೈತ ಸಂಘದವರ ಮತ್ತು ರೈತರ ಸಭೆಯಲ್ಲಿ ಬಾಡಿಗೆ ದರ ನಿಗದಿ ಅಂತಿಮವಾಗದೆ ಅತಂತ್ರ ಸ್ಥಿತಿ ಮುಂದುವರಿಯಿತು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ‘ಅಕಾಲಿಕ ಮಳೆಯಿಂದ ಈಗಾಗಲೆ ಭತ್ತ ನೆಲಕಚ್ಚಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾಗಿ ಎಕರೆಗೆ ₹20 ಸಾವಿರದಿಂದ ₹25 ಸಾವಿರ ನಷ್ಟ ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಯ್ಲು ಯಂತ್ರ ಬಾಡಿಗೆಯನ್ನು ₹2,300 ರಿಂದ ₹3ಸಾವಿರಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತರ ತೊಂದರೆ ಅರಿತು ಹಾರ್ವೆಸ್ಟರ್ ಮಾಲೀಕರು ಯಂತ್ರದ ಬಾಡಿಗೆ ಗಂಟೆಗೆ ₹2,500 ನಿಗದಿ ಮಾಡುವಂತೆ ಆಗ್ರಹಿಸಿದರು.

ADVERTISEMENT

ಭತ್ತ ಕೊಯ್ಲು ಯಂತ್ರ ಮಾಲೀಕರಾದ ರಾಜಶೇಖರರೆಡ್ಡಿ, ನರಸಿಂಹಲು, ಕೆ.ಭಾಸ್ಕರ, ವಾಸು, ವಿನಯ ಮಾತನಾಡಿ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಯಂತ್ರ ಖರೀದಿಸಿದ್ದೇವೆ. ಡ್ರೈವರ್, ಹೆಲ್ಪರ್ ಕೊರತೆಯಿದ್ದು, ವೇತನ ಹೆಚ್ಚಳವಾಗಿದೆ. ಯಂತ್ರದ ಬಿಡಿ ಭಾಗಗಳ ಬೆಲೆಯೂ ದುಪ್ಪಟ್ಟಾಗಿದೆ. ಕೊಯ್ಲು ಯಂತ್ರದ ಬಾಡಿಗೆ ಗಂಟೆಗೆ ₹2,800 ಕಡಿಮೆ ದರಕ್ಕೆ ಒದಗಿಸಲು ಸಾಧ್ಯವಿಲ್ಲ. ರೈತರು ಸಹ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಚರ್ಚೆಯ ಬಳಿಕವೂ ರೈತರು ಮತ್ತು ಹಾರ್ವೆಸ್ಟರ್ ಮಾಲೀಕರ ಮಧ್ಯೆ ಬಾಡಿಗೆ ದರ ಅಂತಿಮಗೊಳ್ಳಲಿಲ್ಲ.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ ಮಾತನಾಡಿ, ರೈತರು ಗಂಟೆಗೆ ₹2,500 ಹೆಚ್ಚಿನ ಬಾಡಿಗೆ ನೀಡಬಾರದು. ಕೃಷಿ ಯಂತ್ರಧಾರೆ ಮರು ಆರಂಭಿಸಿ ತಾಲ್ಲೂಕಿಗೆ ಹತ್ತು ಕೊಯ್ಲು ಯಂತ್ರ ಒದಗಿಸುವಂತೆ, ಸಣ್ಣ ಪ್ರಮಾಣದ ಕೊಯ್ಲು ಯಂತ್ರಗಳನ್ನು ಕೊಳ್ಳಲು ರಿಯಾಯಿತಿ ದರ ಒದಗಿಸುವಂತೆ ಒತ್ತಾಯಿಸಿದರು.

‘ಯಂತ್ರದ ಮಾಲೀಕರು, ರೈತರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬೆಲೆ ನಿಗದಿಪಡಿಸಿಕೊಳ್ಳುವಂತೆ’ ತಹಶೀಲ್ದಾರ್ ಎಸ್. ಶಿವರಾಜ ಮತ್ತು ಸಿರುಗುಪ್ಪ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್ ಸಲಹೆ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಿಮ್ಮಪ್ಪ ನಾಯಕ, ರೈತರ(ಕಾರ್ತೀಕ್ ಬಣ)ಸಂಘದ ಪದಾಧಿಕಾರಿಗಳಾದ ವಿ. ನಾಗರಾಜ, ವಿ. ಲಿಂಗರಾಜ, ಗಂಗಣ್ಣ, ಗೆಣಕಿಹಾಳ್ ಸೋಮಶೇಖರ, ಕೃಷಿ ಅಧಿಕಾರಿ ಕೆ. ಸೋಮಶೇಖರ, ಸಹಾಯಕ ಕೃಷಿ ಅಧಿಕಾರಿ ಜ್ಯೋತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.