ADVERTISEMENT

ರಾಜ್ಯ, ಕೇಂದ್ರದ ವಿರುದ್ಧ ರೈತರು, ಕಾರ್ಮಿಕರಿಂದ ಹೊಸಪೇಟೆಯಲ್ಲಿ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 9:47 IST
Last Updated 2 ಅಕ್ಟೋಬರ್ 2020, 9:47 IST
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮುಖಂಡರು, ಕಾರ್ಯಕರ್ತರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮುಖಂಡರು, ಕಾರ್ಯಕರ್ತರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ   

ಹೊಸಪೇಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ತಂದಿವೆ ಎಂದು ಆರೋಪಿಸಿ, ಅದನ್ನು ವಿರೋಧಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಕಾರ್ಮಿಕ ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ಮಾತನಾಡಿ, ‘28ರಂದು ಯಶಸ್ವಿಯಾಗಿ ಕರ್ನಾಟಕ ಬಂದ್‌ ಮಾಡುವುದರ ಮೂಲಕ ಎರಡೂ ಸರ್ಕಾರಗಳಿಗೂ ಎಚ್ಚರಿಕೆ ಕೊಟ್ಟಿದ್ದೇವೆ. ಹೀಗಿದ್ದರೂ ರೈತ, ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಸರ್ಕಾರಗಳು ಗಂಭೀರ ಚಿಂತನೆ ನಡೆಸುತ್ತಿಲ್ಲ. ಸರ್ಕಾರಗಳು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ನರೇಂದ್ರ ಮೋದಿ, ಅಮಿತ್‌ ಷಾ ಅಧಿಕಾರಕ್ಕೆ ಬಂದ ದಿನದಿಂದಲೂ ರೈತರು, ಕಾರ್ಮಿಕರನ್ನು ಮೋಸ ಮಾಡುತ್ತ ಬಂದಿದ್ದಾರೆ’ ಎಂದು ಆರೋಪಿಸಿದರು.

‘ರೈತರು ಈ ದೇಶಕ್ಕೆ ಅನ್ನ ಕೊಡುವವರು. ಅವರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಕಾರ್ಪೊರೇಟ್‌ ಕಂಪನಿಗಳಿಗೆ ಮಣೆ ಹಾಕುವುದಕ್ಕಾಗಿ ರೈತರನ್ನು ಒಕ್ಕಲು ಎಬ್ಬಿಸುತ್ತಿರುವುದು ಸರಿಯಾದ ಧೋರಣೆಯಲ್ಲ. ರೈತರು ಉಳಿದರೆ ಜಮೀನಿನಲ್ಲಿ ಬೆಳೆ ಬೆಳೆಯುತ್ತಾರೆ. ಆದರೆ, ಬಂಡವಾಳಷಾಹಿಗಳಿಂದ ಅದು ಸಾಧ್ಯವಾಗುವುದಿಲ್ಲ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, ‘ರಾಜ್ಯ, ಕೇಂದ್ರ ಸರ್ಕಾರ ಭೂಸುಧಾರಣೆ, ಭೂಸ್ವಾಧೀನ, ವಿದ್ಯುತ್‌ ಶಕ್ತಿ, ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಜನಸಾಮಾನ್ಯರನ್ನು ಸಂಪೂರ್ಣ ನಾಶ ಮಾಡಲು ಹೊರಟಿವೆ. ಜನವಿರೋಧಿ ಕಾಯ್ದೆ ಹಿಂಪಡೆಯುವವರೆಗೆ ಹೋರಾಟ ಮುಂದುವರೆಸಲಾಗುವುದು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಬಣ) ರಾಜ್ಯ ಘಟಕದ ಉಪಾಧ್ಯಕ್ಷ ಖಾಜಾ ನಿಯಾಜಿ, ಪ್ರಧಾನ ಕಾರ್ಯದರ್ಶಿ ಕೆ. ಪರಶುರಾಮಪ್ಪ, ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ, ಮುಖಂಡರಾದ ತಾಯಪ್ಪ ನಾಯಕ, ಮರಡಿ ಜಂಬಯ್ಯ ನಾಯಕ, ಕೆ.ಎಂ. ಸಂತೋಷ್‌ ಕುಮಾರ್‌, ಸೋಮಶೇಖರ್‌ ಘಂಟೆ, ಜಡಿಯಪ್ಪ, ನಾಗರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.