ಹೊಸಪೇಟೆ (ವಿಜಯನಗರ): ‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ನಗರದಲ್ಲಿ ಜರುಗಿದ ಉಪವಿಭಾಗಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾಲಕಾಲಕ್ಕೆ ಇತ್ಯರ್ಥಪಡಿಸಬೇಕು. ವಿನಾಕಾರಣ ಕಾಲಹರಣ ಮಾಡಬಾರದು’ ಎಂದು ಸೂಚಿಸಿದರು.
‘ಸ್ಥಳೀಯ ಸಂಸ್ಥೆವಾರು ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿಗಳಿಗೆ ನೀಡಿದ ಸೌಲಭ್ಯ, ಪೌರ ಕಾರ್ಮಿಕರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ, ಇ.ಎಸ್.ಐ. ಮತ್ತು ಇ.ಪಿ.ಎಫ್. ಸೌಲಭ್ಯ, ಆರೋಗ್ಯ ತಪಾಸಣೆಯ ವಿವರ ಪಡೆದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತಕುಮಾರ, ಜಗದೀಶ, ಚೈಲ್ಡ್‌ಲೈನ್ ಸಂಸ್ಥೆಯ ಸಂಯೋಜಕ ಚಿದಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.