ADVERTISEMENT

ರಿಯಾಯಿತಿ ಬಿತ್ತನೆ ಬೀಜಕ್ಕೆ ಎಫ್‍ಐಡಿ ಸಂಖ್ಯೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 24 ಮೇ 2023, 13:16 IST
Last Updated 24 ಮೇ 2023, 13:16 IST

ಕಂಪ್ಲಿ: ಪ್ರಸಕ್ತ ಸಾಲಿನ ರಿಯಾಯಿತಿ ಬಿತ್ತನೆ ಬೀಜ ಪಡೆಯಲು ರೈತ ಫಲಾನುಭವಿಗಳು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಸಂಖ್ಯೆಯನ್ನು ಹೊಂದಿರಬೇಕು ಎಂದು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಧರ್ ತಿಳಿಸಿದ್ದಾರೆ.

ಬಿತ್ತನೆ ಬೀಜ ಪಡೆಯುವ ರೈತರು ಎಫ್‍ಐಡಿ ಸಂಖ್ಯೆ ಜೊತೆಗೆ ಆಧಾರ್‌ಕಾರ್ಡ್‌ ಜರಾಕ್ಸ್ ಪ್ರತಿ, ಜಮೀನಿನ ದಾಖಲೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಬಾರ್‌ಕೋಡ್ ಹೊಂದಿರುವ ಬಿತ್ತನೆ ಬೀಜಗಳನ್ನು ವಿತರಿಸಲಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಂತ್ರಾಂಶ ಮೂಲಕವೇ ವಿತರಿಸಲಾಗುವುದರಿಂದ ರೈತರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ರೈತರು ತಮ್ಮ ಜಮೀನಿಗೆ ಬೇಕಾದ ಬಿತ್ತನೆ ಬೀಜಗಳನ್ನು ಸ್ವತಃ ಖುದ್ದಾಗಿ ಫಲಾನುಭವಿಗಳೇ ದಾಖಲೆಗಳೊಂದಿಗೆ ಪಡೆಯಬೇಕಿದ್ದು, ಎಫ್‍ಐಡಿ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ವಿವರಗಳನ್ನು ಎಸ್‍ಎಂಎಸ್ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಎಲ್ಲ ವರ್ಗದ ರೈತರಿಗೆ 5 ಎಕರೆ ಅಥವಾ ಅವರ ಹಿಡುವಳಿ ಅನುಸಾರ ಕಡಿಮೆ ಇರುವ ವಿಸ್ತೀರ್ಣದ ಜಮೀನಿಗೆ ಬಿತ್ತನೆ ಬೀಜ ವಿತರಿಸಲಾಗುವುದು. ಖರೀದಿಸಿದ ಬಿತ್ತನೆ ಬೀಜಗಳ ರಸೀದಿಯಲ್ಲಿ ಬಿತ್ತನೆ ಬೀಜಗಳ ಲಾಟ್ ನಂಬರ್, ಮಾರಾಟದ ಬೆಲೆ ಪರಿಶೀಲಿಸಿ ಕಾಯ್ದಿರಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಚಾಲ್ತಿ ಸಾಲಿನ ಇಲ್ಲವೇ ಈಚೆಗೆ ನವೀಕರಿಸಲಾದ ಆರ್.ಡಿ ನಂಬರ್ ಹೊಂದಿದ ಜಾತಿ ಪ್ರಮಾಣ ಪತ್ರ, ಅಗತ್ಯ ದಾಖಲೆಗಳನ್ನು ನೀಡಿ ರಿಯಾಯಿತಿ ಬಿತ್ತನೆ ಬೀಜಗಳನ್ನು ಪಡೆಯಬಹುದು. ಪ್ರಮಾಣಿತ ಬಿತ್ತನೆ ಬೀಜಗಳನ್ನು ಖರೀದಿಸಿದ ರೈತರಿಗೆ ಮುಂದಿನ ಮೂರು ವರ್ಷಗಳವರೆಗೆ ಅದೇ ಬೆಳೆ ಅದೇ ತಳಿಯ ಬಿತ್ತನೆ ಬೀಜಗಳನ್ನು ವಿತರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.