ADVERTISEMENT

ಪಕ್ಷಾಂತರದ ಮೊದಲ ಚುನಾವಣೆ

ಉಪಚುನಾವಣೆಗಳು ಸಿಂಗ್‌ ಮನೆತನದ ಪಾಲಿಗೆ ವರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ನವೆಂಬರ್ 2019, 19:45 IST
Last Updated 30 ನವೆಂಬರ್ 2019, 19:45 IST
   

ಹೊಸಪೇಟೆ: ಈ ಹಿಂದೆ ಎರಡು ಉಪಚುನಾವಣೆಗಳನ್ನು ಕಂಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರವು, ಈಗ ಮೂರನೇ ಉಪಚುನಾವಣೆಯ ಹೊಸ್ತಿಲಲ್ಲಿದೆ.

ಅಂದಿನ ಶಾಸಕರು ನಿಧನರಾಗಿದ್ದರಿಂದ ಈ ಹಿಂದೆ ಎರಡು ಉಪಚುನಾವಣೆಗಳಿಗೆ ಕ್ಷೇತ್ರ ಸಾಕ್ಷಿಯಾಗಿತ್ತು. ಆದರೆ, ಈ ಸಲ ಅಂತಹದ್ದೇನೂ ಆಗಿಲ್ಲ. ಅವಧಿಗೂ ಮುನ್ನವೇ ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಬಂದೊದಗಿದೆ.

1967ರಲ್ಲಿ ನಡೆದ ಚುನಾವಣೆಯಲ್ಲಿ ರೈತ ಮುಖಂಡ ಆರ್‌. ನಾಗನಗೌಡ ಕಾಂಗ್ರೆಸ್‌ನಿಂದ ಜಯಿಸಿದ್ದರು. 1970ರಲ್ಲಿ ಅವರು ನಿಧನ ಹೊಂದಿದ್ದರಿಂದ ಆ ವರ್ಷ ಉಪಚುನಾವಣೆ ನಡೆಯಿತು. 1991ರಲ್ಲಿ ಗುಜ್ಜಲ್‌ ಹನುಮಂತಪ್ಪ ಮರಣ ಹೊಂದಿದ್ದಕ್ಕೆ ಮತ್ತೊಂದು ಉಪಚುನಾವಣೆ ನಡೆಸಬೇಕಾಯಿತು.

ADVERTISEMENT

ಉಪಚುನಾವಣೆ ಸಿಂಗ್‌ ಕುಟುಂಬಕ್ಕೆ ವರ:

ಈ ಹಿಂದೆ ನಡೆದ ಎರಡೂ ಉಪಚುನಾವಣೆಗಳು ಆನಂದ್‌ ಸಿಂಗ್‌ ಕುಟುಂಬಕ್ಕೆ ವರವಾಗಿ ಪರಿಣಮಿಸಿವೆ. ಎರಡು ಸಲ ಆ ಮನೆತನದವರೇ ಚುನಾವಣೆಯಲ್ಲಿ ಗೆದ್ದಿರುವುದು ವಿಶೇಷ.

1970ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್‌ ಅವರ ದೊಡ್ಡಪ್ಪ ಬಿ. ಸತ್ಯನಾರಾಯಣ ಸಿಂಗ್‌ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.1972ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿ. ಸತ್ಯನಾರಾಯಣ ಸಿಂಗ್‌ ಪುನರಾಯ್ಕೆಗೊಂಡು, ಐದು ವರ್ಷ ಶಾಸಕರಾಗಿ ಕೆಲಸ ನಿರ್ವಹಿಸಿದ್ದರು.

1991ರಲ್ಲಿ ಜರುಗಿದ ಉಪಚುನಾವಣೆ ಸತ್ಯನಾರಾಯಣ ಸಿಂಗ್‌ ಅವರ ಹಿರಿಯ ಮಗ ರತನ್‌ ಸಿಂಗ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ‘ತನ್ನದೇ ಆದ ವರ್ಚಸ್ಸು ಬೆಳೆಸಿಕೊಳ್ಳಲು ಅಸಾಧ್ಯವಾಗಿದ್ದರಿಂದ ರತನ್‌ ಸಿಂಗ್‌, ರಾಜಕೀಯದಲ್ಲಿ ಹೆಚ್ಚು ಬೆಳೆಯಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

2008, 2013 (ಬಿಜೆಪಿಯಿಂದ) ಹಾಗೂ 2018ರ (ಕಾಂಗ್ರೆಸ್‌ನಿಂದ) ಚುನಾವಣೆಯಲ್ಲಿ ಸತತ ಮೂರು ಸಲ ಗೆದ್ದು ದಾಖಲೆ ನಿರ್ಮಿಸಿದ ಆನಂದ್‌ ಸಿಂಗ್‌ ಸದ್ಯ ಅನರ್ಹಗೊಂಡಿದ್ದಾರೆ. ಅವರೇ ರಾಜೀನಾಮೆ ನೀಡಿದ್ದರಿಂದ ಚುನಾವಣೆ ಎದುರಾಗಿದೆ. ಈ ಹಿಂದಿನ ಎರಡೂ ಚುನಾವಣೆಯಲ್ಲಿ ಅವರ ಕುಟುಂಬ ಸದಸ್ಯರು ಕಾಂಗ್ರೆಸ್‌ನಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆನಂದ್‌ ಸಿಂಗ್‌ ರಾಜೀನಾಮೆಯ ಜತೆಗೆ ಕಾಂಗ್ರೆಸ್‌ ಪಕ್ಷ ತೊರೆದು, ಬಿಜೆಪಿಯಿಂದ ಮರು ಆಯ್ಕೆ ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.