ADVERTISEMENT

ಹಗರಿಬೊಮ್ಮನಹಳ್ಳಿ: ಪಾಳುಬಿದ್ದ ಮೀನುಮರಿ ಉತ್ಪಾದನೆ ಕೇಂದ್ರ

ಸಮಸ್ಯೆಗಳ ನಡುವೆಯೇ ಪ್ರಾಯೋಗಿಕ ಪರೀಕ್ಷೆಗೆ ಮುಂದಾದ ಇಲಾಖೆ

ಸಿ.ಶಿವಾನಂದ
Published 28 ನವೆಂಬರ್ 2024, 5:18 IST
Last Updated 28 ನವೆಂಬರ್ 2024, 5:18 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಬಳಿ ಇರುವ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಬಳಕೆ ಇಲ್ಲದೆ ಪಾಳುಬಿದ್ದಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಬಳಿ ಇರುವ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಬಳಕೆ ಇಲ್ಲದೆ ಪಾಳುಬಿದ್ದಿರುವುದು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಬಳಿ 46 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡ ಕೊಟ್ಯಂತರ ರೂಪಾಯಿ ಮೌಲ್ಯದ ಮೀನುಮರಿ ಉತ್ಪಾದನಾ ಕೇಂದ್ರ ಈಗ ಹಾಳು ಕೊಂಪೆಯಾಗಿದೆ.

ಸುಸಜ್ಜಿತ ಕಚೇರಿ ಕಟ್ಟಡ, ಹತ್ತಾರು ಹೊಂಡಗಳು, ಪ್ಯಾಕಿಂಗ್ ಕೇಂದ್ರ, ಪಂಪ್‍ಸೆಟ್ ಘಟಕ, ಸಣ್ಣ ಕಾಲುವೆಗಳು ಬಳಕೆಯಾಗದೆ ಹಾಳಾಗಿವೆ. ಈ ಎಲ್ಲ ಸಮಸ್ಯೆಗಳ ನಡುವೆಯೇ ಇಲಾಖೆ ಮೀನುಮರಿಗಳ ಉತ್ಪಾದನೆಯ ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿದೆ.

ಈ ಕೇಂದ್ರ 80ರ ದಶಕದಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಗೆ ಮೀನು ಸಾಕಣೆಗಾಗಿ ಮೀನುಮರಿಗಳನ್ನು ಸರಬರಾಜು ಮಾಡುವ ಮೂಲಕ ಹೆಸರುವಾಸಿಯಾಗಿತ್ತು. ವಿವಿಧ ತಳಿಗಳ ಮೀನುಮರಿ ಉತ್ಪಾದನೆಗೆ ಕೇಂದ್ರ ಸ್ಥಾನದಂತಿದ್ದ ಈ ಪ್ರದೇಶ ಈಗ ಪಳೆಯುಳಿಕೆಯಂತೆ ಉಳಿದಿದೆ. ಬರೀ ಜಾಲಿಗಿಡಗಳು ಬೆಳೆದಿದ್ದು ಹತ್ತಾರು ಎಕರೆ ಪ್ರದೇಶ ಒತ್ತುವರಿಯಾಗಿದೆ.

ADVERTISEMENT

ಮಾಲವಿ ಜಲಾಶಯ ಸಕಾಲದಲ್ಲಿ ಭರ್ತಿಯಾಗದೆ, ಅಗತ್ಯ ನೀರು ದೊರೆಯದೇ ಇರುವುದು ಕೇಂದ್ರ ನಿರ್ಜೀವಗೊಳ್ಳಲು ಪ್ರಮುಖ ಕಾರಣವಾಗಿದೆ. ಸರ್ಕಾರದ ಇಲ್ಲಿನ ಆಸ್ತಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿಯೇ ಇಲ್ಲಿದ್ದ ಉಪನಿರ್ದೇಶಕರ ಕಚೇರಿಯನ್ನು ಸ್ಥಳಾಂತರಗೊಳಿಸಿಲ್ಲ. ಉಪ ನಿರ್ದೇಶಕರು ಸಹಿತ ಇಬ್ಬರು ಸಿಬ್ಬಂದಿ ಇಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1991ರಲ್ಲಿ ಖಾಸಗಿಯವರು ಗುತ್ತಿಗೆ ಆಧಾರದಲ್ಲಿ ಇಲ್ಲಿ ಮೀನುಸಾಕಣೆ ಮಾಡಿದ್ದರು. ಬಳಿಕ ಒಂದೇ ವರ್ಷದಲ್ಲಿ ನಷ್ಟದ ಕಾರಣಕ್ಕಾಗಿ ತೆರವುಗೊಳಿಸಿದರು. ಅಲ್ಲಿಂದ ಇಲ್ಲಿಯರವರೆಗೂ ಕೇಂದ್ರ ಜಾಲಿ ಕಾಡಾಗಿದೆ.

ಸುಸ್ಥಿತಿಯಲ್ಲಿರುವ ಹೊಂಡಗಳಲ್ಲಿ ಮೀನುಮರಿ ಉತ್ಪಾದನೆ ಮಾಡಬಹುದಾಗಿದೆ. ಸರ್ಕಾರ ಅಗತ್ಯ ಅನುದಾನ ನೀಡಿದರೆ ಕೇಂದ್ರವನ್ನು ಪುನುರುಜ್ಜೀವನ ಗೊಳಿಸುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ಮನವರಿಕೆ ಮಾಡುವ ಉದ್ಧೇಶ ಇದಾಗಿದೆ. 40 ದಿನಗಳ ಬಳಿಕ ಇದರ ಸಂಪೂರ್ಣ ಫಲಿತಾಂಶ ಬರಲಿದೆ ಎನ್ನುತ್ತಾರೆ ಮೀನುಮರಿ ಉತ್ಪಾದನಾ ಕೇಂದ್ರದ ಉಪನಿರ್ದೇಶಕ ರಿಯಾಜ್ ಅಹ್ಮದ್.

ಮೀನುಮರಿಗಳನ್ನು ಉತ್ಪಾದಿಸುವ ಹೊಂಡಗಳ ದುಸ್ಥಿತಿ
ಮೀನುಮರಿಗಳ ಉತ್ಪಾದನೆಗೆ ಚೌಕಿಯಿಂದ ತಂದ ಅತೀಸಣ್ಣ ಮರಿಗಳನ್ನು ಬಿಡುವ ಸಿದ್ಧತೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ

Cut-off box - ಪ್ರಾಯೋಗಿಕ ಸಾಕಾಣಿಕೆ ಈಗ ಬರೋಬ್ಬರಿ 33 ವರ್ಷಗಳ ಬಳಿಕ ಇಲಾಖೆ ಪ್ರಾಯೋಗಿಕ ಮೀನುಮರಿ ಸಾಕಾಣಿಕೆಗೆ ಮುಂದಾಗಿದೆ ಇರುವುದರಲ್ಲಿ ಸುಸ್ಥಿತಿಯಲ್ಲಿರುವ ಎರಡು ಹೊಂಡಗಳನ್ನು ಸ್ವಚ್ಛಗೊಳಿಸಿ ಶಿವಪುರದ ಮೀನು ಚೌಕಿಯಿಂದ ಅತ್ಯಂತ ಸೂಕ್ಷ್ಮಗಾತ್ರದ ಗೌರಿ ತಳಿಯ ಮೀನುಗಳನ್ನು ತಂದು ಬಿಡಲಾಗಿದೆ. ಎರಡು ಹೊಂಡಗಳಲ್ಲಿ ತಲಾ 2.5ಲಕ್ಷ ಮೀನಿನ ಮರಿಗಳನ್ನು ಅಭಿವೃದ್ಧಿಗೊಳಿಸುವ ಉದ್ಧೇಶ ಹೊಂದಲಾಗಿದೆ. ಈ ಮೂಲಕ ಕೇಂದ್ರಕ್ಕೆ ಮರುಜೀವ ನೀಡುವ ಸಣ್ಣ ಪ್ರಯತ್ನ ಇದಾಗಿದೆ ಎಂದು ಕೇಂದ್ರದ ಉಪನಿರ್ದೇಶಕ ರಿಯಾಜ್ ಅಹ್ಮದ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.