ಸಂಡೂರು: ಇಲ್ಲಿನ ಪರ್ತಿಷ್ಠಿತ ಗಣಿ ಕಂಪನಿ 'ಸಂಡೂರು ಮ್ಯಾಂಗನೀಸ್ ಮತ್ತು ಐರನ್ಸ್ ಲಿಮಿಟೆಡ್'ನ ಮೈನಿಂಗ್ ಲೀಜ್ ಸಂಖ್ಯೆ 2768, ಭಾರತ ಸರ್ಕಾರದ ಗಣಿ ಸಚಿವಾಲಯ ನೀಡುವ 2023-24 ನೇ ಸಾಲಿನ 5 ಸ್ಟಾರ್ ರೇಟಿಂಗ್ ಪ್ರಶಸ್ತಿಗೆ ಭಾಜನವಾಗಿದೆ.
ನವದೆಹಲಿಯ ಡಾ. ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಆಗಸ್ಟ್ 7 ರಂದು ನಡೆದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ,ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವ ಸತೀಶ್ ದುಬೆಯವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸ್ಮಯೋರ್ ಗಣಿ ಸಂಸ್ಥೆಯ ನಿರ್ದೇಶಕ ಮೊಹಮ್ಮದ್ ಅಬ್ದುಲ್ ಸಲೀಂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಪ್ರಭು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಭಾರತ ಸರ್ಕಾರದ ಗಣಿ ಸಚಿವಾಲಯ 2014-15 ರಿಂದ 5 ಸ್ಟಾರ್ ರೇಟಿಂಗ್ ಪ್ರಶಸ್ತಿ ನೀಡಲು ಪ್ರಾರಂಭಿಸಿದ್ದು ಅಂದಿನಿಂದಲೂ ಸ್ಮಯೋರ್ ಸಂಸ್ಥೆ ಸತತವಾಗಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಕೇಂದ್ರ ಗಣಿ ಸಚಿವಾಲಯ ಗಣಿ ಕಂಪನಿಗಳ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಮಾನದಂಡವಾಗಿಸಿಕೊಂಡು ಪ್ರಶಸ್ತಿ ನೀಡುವುದು ನಿಯಮ.
ಈ ಬಾರಿ ಒಟ್ಟು 1,256 ಮೈನಿಂಗ್ ಲೀಜ್‌ಗಳನ್ನು ಮೌಲ್ಯ ಮಾಪನ ಮಾಡಿದ್ದು 86 ಕಂಪನಿಗಳಿಗೆ ಪ್ರಶಸ್ತಿ ದೊರೆತಿದೆ. ಆ ಪಟ್ಟಿಯಲ್ಲಿ ನಿರಂತರ ಸ್ಥಾನ ಉಳಿಸಿಕೊಂಡು ಬಂದಿರುವುದಕ್ಕೆ ಸ್ಮಯೋರ್ ಸಂಸ್ಥೆಯ ಆಡಳಿತ ಮಂಡಳಿ, ಅಧಿಕಾರಿಗಳು ತಮ್ಮ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.