ಬಳ್ಳಾರಿ: ಪ್ರವಾಹದಿಂದ ಮನೆಗೆ ಸಂಪೂರ್ಣ ಹಾನಿಯಾದರೆ ನೀಡುತ್ತಿದ್ದ ₹ 5 ಲಕ್ಷ ಪರಿಹಾರವನ್ನು, ಭಾಗಶಃ ಹಾನಿಯಾದ ಮನೆಯ ಮರುನಿರ್ಮಾಣಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ.
ಹಿಂದಿನ ವರ್ಷ ಪ್ರವಾಹದಲ್ಲಿ ಮನೆ ಸಂಪೂರ್ಣ ಹಾನಿಯಾದವರಿಗೆ ₹ 5ಲಕ್ಷ ಪರಿಹಾರವನ್ನು ನೀಡಲಾಗಿತ್ತು. ಆದರೆ ಮನೆ ದುರಸ್ತಿಗೆ ಆಗ ₹ 95,100 ನೀಡಲಾಗಿತ್ತು. ಈ ವರ್ಷ ಕೇಂದ್ರ ಸರ್ಕಾರದ ಮಾರ್ಗಸೂಚಿ ದರಕ್ಕಿಂತಲೂ ಹೆಚ್ಚು ಪರಿಹಾರಧನ ಸಂತ್ರಸ್ತರಿಗೆ ದೊರಕಲಿದೆ. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹೆಚ್ಚುವರಿ ಹಣವನ್ನು ಭರಿಸಲು ನಿರ್ಧರಿಸಿದ್ದು ಶುಕ್ರವಾರ ಆದೇಶ ಹೊರಬಿದ್ದಿದೆ.
ಮನೆಗೆ ಶೇ 25ರಿಂದ ಶೇ 75ರವರೆಗೂ ಹಾನಿಯಾದರೆ ನೀಡುತ್ತಿದ್ದ ಪರಿಹಾರ ಧನವನ್ನು ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಗುಂಪಿನ ಸಂತ್ರಸ್ತರು ಹೊಸದಾಗಿ ಮನೆ ಕಟ್ಟಿಕೊಳ್ಳಲು ಈ ಮೊತ್ತ ನೆರವಾಗಲಿದೆ.
ಭಾಗಶಃ ಮನೆಹಾನಿಯಾದರೆ ನೀಡುತ್ತಿದ್ದ ₹ 95,100ರ ಬದಲಿಗೆ ₹ 3 ಲಕ್ಷ ಪರಿಹಾರವನ್ನು ಸರ್ಕಾರ ನೀಡಲಿದೆ. ಶೇ 15.25ರಷ್ಟು ಹಾನಿಯಾದರೆ ಕೇವಲ ₹ 5,200 ನೀಡಲಾಗುತ್ತಿತ್ತು. ಈಗ ಅದನ್ನು ₹ 50 ಸಾವಿರಕ್ಕೆ ಹೆಚ್ಚಿಸಲಾಗಿದೆ.
ದಿನಬಳಕೆ ವಸ್ತುಗಳಿಗೆ ₹ 10 ಸಾವಿರ: ಪ್ರವಾಹದಿಂದ ಬಾಧಿತರಾದ ಜನರ ಬಟ್ಟೆ ಹಾಗೂ ದಿನಬಳಕೆ ವಸ್ತುಗಳಿಗಾಗಿ ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪ ಪರಿಹಾರ ಮಾರ್ಗಸೂಚಿಯಲ್ಲಿ ಪ್ರತಿ ಕುಟುಂಬಕ್ಕೆ ₹ 3,800 ನಿಗದಿಪಡಿಸಿದ್ದು, ರಾಜ್ಯ ಸರ್ಕಾರವು ಅದಕ್ಕೆ ₹ 6,200 ಸೇರಿಸಿ ಒಟ್ಟು ₹10 ಸಾವಿರ ನೀಡಲಿದೆ. ರಾಜೀವಗಾಂಧಿ ವಸತಿ ನಿಗಮವು ಅಭಿವೃದ್ಧಿಪಡಿಸಿದ ತಂತ್ರಾಂಶದ ಮೂಲಕವೇ ಸಂತ್ರಸ್ತರ ಬ್ಯಾಂಕ್ ಖಾತೆಗೆ ಪರಿಹಾರಧನ ಸೇರಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ‘ಈ ವರ್ಷ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಧನ ದೊರಕಲಿದೆ. ಆಗ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡಲಾಗಿತ್ತು. ಆದರೆ ದುರಸ್ತಿಗೆ ನಿಗದಿಯಾಗಿದ್ದ ಮೊತ್ತ ಈ ವರ್ಷ ಹೆಚ್ಚಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.