ADVERTISEMENT

ರಂಗಭೂಮಿ ಮೇಲೆ ಜನಪದ ಪ್ರಭಾವ: ಪ್ರಾಧ್ಯಾಪಕಿ ಶೋಭಾ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:57 IST
Last Updated 11 ನವೆಂಬರ್ 2025, 4:57 IST
ಬಳ್ಳಾರಿ ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಭಾರತೀಯ ರಂಗಭೂಮಿ ನಡೆದು ಬಂದ ಹಾದಿ’ ಎಂಬ ಉಪನ್ಯಾಸದಲ್ಲಿ ಪ್ರಾಧ್ಯಾಪಕಿ ಆರ್. ಶೋಭಾ ಮಾತನಾಡಿದರು
ಬಳ್ಳಾರಿ ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಭಾರತೀಯ ರಂಗಭೂಮಿ ನಡೆದು ಬಂದ ಹಾದಿ’ ಎಂಬ ಉಪನ್ಯಾಸದಲ್ಲಿ ಪ್ರಾಧ್ಯಾಪಕಿ ಆರ್. ಶೋಭಾ ಮಾತನಾಡಿದರು   

ಬಳ್ಳಾರಿ: ‘ಭಾರತೀಯ ರಂಗಭೂಮಿಯ ಮೇಲೆ ಜನಪದ ಸಂಸ್ಕೃತಿಯ ಪ್ರಭಾವ ಗಾಢವಾಗಿದೆ. ಜನಪದರು ತಮ್ಮ ಸಂತೋಷ, ಸಂಕಟ, ತಳಮಳಗಳನ್ನು ಅಭಿನಯದ ಮೂಲಕ ತಮ್ಮನ್ನು ತಾವು ಕಂಡುಕೊಂಡರು’ ಎಂದು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರಾಧ್ಯಾಪಕಿ ಆರ್.ಶೋಭಾ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ‘ಸಾಂಸ್ಕೃತಿಕ ಸಮಿತಿ’, ಕನ್ನಡ ಮತ್ತು ನಾಟಕ ವಿಭಾಗಗಳಿಂದ ಸೋಮವಾರ ಆಯೋಜಿಸಿದ್ದ ‘ಭಾರತೀಯ ರಂಗಭೂಮಿ ನಡೆದು ಬಂದ ಹಾದಿ’ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಸಾಮಾನ್ಯ ಜನರ ಸಾಂಸ್ಕೃತಿಕ ವಲಯದ ಜೀವನಾನುಭವ ಸಹಜ ಅಭಿನಯದ ಮೂಲಕ ತೆರೆದುಕೊಂಡವು. ರಾಮಾಯಣ, ಮಹಾಭಾರತದ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಜನಪದರು ರಂಗಭೂಮಿಯಲ್ಲಿ ಕಟ್ಟಿಕೊಟ್ಟರು. ಆ ಮೂಲಕ ಜನಪದ ದೈವ, ನಂಬಿಕೆ, ಆಚರಣೆಗಳನ್ನು ಪ್ರೇಕ್ಷಕರಿಗೆ ದಾಟಿಸಿದರು’ ಎಂದು ವಿಶ್ಲೇಷಿಸಿದರು.

ADVERTISEMENT

‘ಭರತನ ನಾಟ್ಯ ಶಾಸ್ತ್ರ’ವು ರಂಗಭೂಮಿಯ ಮೀಮಾಂಸೆಯನ್ನು ವಿಶಿಷ್ಟವಾಗಿ ದಾಖಲಿಸಿದ ಅಪರೂಪದ ಕೃತಿ. ಹಾಗೆ ನೋಡಿದರೆ ಇದಕ್ಕಿಂತ ಮುಂಚೆಯೇ ನಟನೆಯ ರಂಜನೀಯ ಕಲ್ಪನೆಗಳು ಶುದ್ಧಾಂಗವಾಗಿ ಧರ್ಮದ ತಳಹದಿಯ ಮೇಲೆ ಹುಟ್ಟಿದವಾಗಿದ್ದವು ಎನ್ನುವುದನ್ನು ಅಲ್ಲಗಳೆಯಲಾಗದು. ಕಾಳಿದಾಸ, ಭವಭೂತಿ, ವಿಶಾಖದತ್ತ, ಅಶ್ವಘೋಷ ಹೀಗೆ ಹಲವು ನಾಟಕಕಾರರು ಆರಂಭದಲ್ಲಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾದರು’ ಎಂದರು.

‘ಜನಪದ ರಂಗಭೂಮಿಯಲ್ಲಿ ಬಯಲಾಟ, ಯಕ್ಷಗಾನಗಳು ಬಂದವು. ಶಿಷ್ಠ ರಂಗಭೂಮಿಯಲ್ಲಿ ಸಮಕಾಲೀನ ಕಥಾ ವಸ್ತುಗಳು ಮುನ್ನೆಲೆಗೆ ಬಂದವು. ಅವು ಸಮಾಜವನ್ನು ತೆರೆದಗಣ್ಣಿನಿಂದ ನೋಡುವಂತೆ ಹೊಸ ಆಲೋಚನೆಗೆ ಈಡು ಮಾಡಿದವು’ ಎಂದು ವಿವರಿಸಿದರು.

ಕಾಲೇಜಿನ ನಾಟಕ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ,  ‘ರಂಗಭೂಮಿಯು ಮನುಷ್ಯನ ತುಡಿತ- ಮಿಡಿತಗಳನ್ನು ಸೂಕ್ಷ್ಮವಾಗಿ ಧ್ವನಿಸುವ ಸಮರ್ಥ ಮಾಧ್ಯಮ. ಪ್ರಧಾನವಾಗಿ ವ್ಯಕ್ತಿ ತನ್ನ ಇರುವಿಕೆಗಾಗಿ ನಡೆಸುವ ಹುಡುಕಾಟ ಮತ್ತು ಹೋರಾಟ ಇಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ಇದು ಅಕ್ಷರಸ್ಥರಿಗೂ, ಅನಕ್ಷರಸ್ಥರಿಗೂ ಏಕಕಾಲದಲ್ಲಿ ಶಿಕ್ಷಣವನ್ನು ನೀಡುತ್ತಲೇ ಬದುಕನ್ನು ಸಹ್ಯಗೊಳಿಸುವಂತಿದೆ’ ಎಂದರು.

ಪ್ರಾಂಶುಪಾಲ ಡಾ. ಜಿ.ಪ್ರಹ್ಲಾದ ಚೌದ್ರಿ ಮಾತನಾಡಿ ‘ಹಾಡು, ಕುಣಿತ, ಸಂಭಾಷಣೆಗಳ ಮೂಲಕ ರಸಾನುಭವವನ್ನು ಉಣಬಡಿಸುವ ರಂಗ ಮಾಧ್ಯಮ ಈ ಹೊತ್ತಿಗೂ ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ’ ಎಂದು ಹೇಳಿದರು.

ನಾಟಕ ವಿಭಾಗದ ಸಾಂಸ್ಕೃತಿಕ ಸಮಿತಿ ಸಂಚಾಲಕಿ ಜ್ಯೋತಿ ಅಣ್ಣರಾವ್, ಅತಿಥಿ ಉಪನ್ಯಾಸಕರಾದ ವಿಷ್ಣು ಹಡಪದ, ನೇತಿ ರಘುರಾಮ್‌, ಸಹಾಯಕ ಪ್ರಾಧ್ಯಾಪಕ ರಾಮಸ್ವಾಮಿ, ಲಿಂಗಪ್ಪ, ಪ್ರವೀಣಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.