ADVERTISEMENT

ಹೊಸಪೇಟೆ: ವಿಷಪ್ರಾಷನದಿಂದ 30ಕ್ಕೂ ಹೆಚ್ಚು ನಾಯಿಗಳು ಸೇರಿ ಪಶು–ಪಕ್ಷಿಗಳು ಸಾವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 7:48 IST
Last Updated 18 ಮಾರ್ಚ್ 2019, 7:48 IST
   

ಹೊಸಪೇಟೆ: ತಾಲ್ಲೂಕಿನ ಕಡ್ಡಿರಾಂಪುರದಲ್ಲಿ ವಿಷ ಮಿಶ್ರಿತ ಆಹಾರ ತಿಂದು ಅನೇಕ ಪಶು–ಪಕ್ಷಿಗಳು ಪ್ರಾಣ ಬಿಟ್ಟಿವೆ.

ಸ್ಥಳೀಯರ ಪ್ರಕಾರ, 30ಕ್ಕೂ ಹೆಚ್ಚು ಬೀದಿ ನಾಯಿ, 40 ಕಾಗೆ, 70 ಕೋಳಿ, 15 ಸಾಕು ಬೆಕ್ಕು, ಎರಡು ಎಮ್ಮೆ, ನಾಲ್ಕು ಕುರಿಗಳು ಅಸುನೀಗಿವೆ.

‘ಯಾರೊ ಕಿಡಿಗೇಡಿಗಳು ಹಂದಿ ಮಾಂಸದಲ್ಲಿ ವಿಷ ಬೆರೆಸಿ ಗ್ರಾಮದ ಅಲ್ಲಲ್ಲಿ ಭಾನುವಾರ ರಾತ್ರಿ ಎಸೆದು ಹೋಗಿದ್ದಾರೆ. ಅವುಗಳನ್ನು ತಿಂದು ನಾಯಿ ಹಾಗೂ ಇತರೆ ಪ್ರಾಣಿಗಳು ಜೀವ ಬಿಟ್ಟಿವೆ. ಗ್ರಾಮದಲ್ಲಿ ಬ್ಯಾಂಕು ಹಾಗೂ ಅದರ ಎ.ಟಿ.ಎಂ. ಇದೆ. ಹಣ ದೋಚುವುದಕ್ಕಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಗ್ರಾಮದ ಮುಖಂಡ ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪಶು ವೈದ್ಯ ಸೇವೆ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣೆ ಬಸವರಾಜ ಸೇರಿದಂತೆ ಐದು ಜನ ವೈದ್ಯರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ನಾಲ್ಕು ನಾಯಿಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೂರು ನಾಯಿಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ.

‘ವಿಷಾಹಾರ ಸೇವಿಸಿ ಪ್ರಾಣಿಗಳು ಜೀವ ಬಿಟ್ಟಿರುವುದು ದೃಢಪಟ್ಟಿದೆ. ಏಕೆ ವಿಷಾಹಾರ ಉಣಿಸಿದರು ಎನ್ನುವುದು ಗೊತ್ತಿಲ್ಲ’ ಎಂದು ಬೆಣ್ಣಿ ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.