ಬಳ್ಳಾರಿ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ದೇವದಾರಿ ಗಣಿಗಾರಿಕೆಗೆ ಭೂಮಿ ನೀಡಲು ನಿರಾಕರಿಸಿದ್ದ ರಾಜ್ಯ ಅರಣ್ಯ ಇಲಾಖೆ, ಈಗ ಅದೇ ಕಂಪನಿಯ ಖನಿಜ ನಿಕ್ಷೇಪ ಶೋಧನೆ ಪ್ರಸ್ತಾವವನ್ನೂ ತಳ್ಳಿ ಹಾಕಿದೆ.
ಹದ್ದಿನಪಡೆಯಲ್ಲಿ ಇರುವ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಮೇಲೆ ಕೆಐಒಸಿಎಲ್ ಕಣ್ಣು ಇಟ್ಟಿರುವ ಕುರಿತು, ಅದಕ್ಕಾಗಿ ನಡೆಸುತ್ತಿರುವ ಪತ್ರ ವ್ಯವಹಾರಗಳ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳನ್ನು (ಜೂನ್ 12 ಮತ್ತು 30) ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಕೆಐಒಸಿಎಲ್‌ನ ಪ್ರಸ್ತಾವವನ್ನು ನಿರಾಕರಿಸಿದೆ.
ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯದ ‘ಹದ್ದಿನಪಡೆ’ ಕಬ್ಬಿಣದ ಅದಿರು ಬ್ಲಾಕ್‌ನ 1,074 ಎಕರೆ(434.73 ಹೆ.) ಪ್ರದೇಶದಲ್ಲಿ ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿ(ಕೆಐಒಸಿಎಲ್)’ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ನಡೆಸುವ ಉದ್ದೇಶ ಹೊಂದಿತ್ತು. ಅದಕ್ಕೆ ಪೂರ್ವಭಾವಿಯಾಗಿ ಖನಿಜ ನಿಕ್ಷೇಪ ಶೋಧ ಕಾರ್ಯಕ್ಕೆ ಮುಂದಾಗಿತ್ತು.
ಖನಿಜ ಶೋಧ ಕಾರ್ಯಕ್ಕಾಗಿ ಕಂಪನಿಯು ಆರಂಭದಲ್ಲಿ 1,074 ಎಕರೆ ಅರಣ್ಯ ವ್ಯಾಪ್ತಿಯಲ್ಲಿ ಒಟ್ಟು 81 ರಂಧ್ರಗಳನ್ನು (ಬೋರ್‌ಹೋಲ್) ಕೊರೆಯಲು ಅವಕಾಶ ಕೋರಿ ಆನ್‌ಲೈನ್ ಅರ್ಜಿ ಸಲ್ಲಿಸಿತ್ತು. ಇದನ್ನು ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಳ್ಳಿಹಾಕಿದ್ದರು. ಬಳಿಕ 9 ರಂಧ್ರಕ್ಕೆ ಪ್ರಸ್ತಾವವನ್ನು ಇಳಿಸಲಾಗಿತ್ತು. ಇದರಲ್ಲಿ ಮೂರು ರಂಧ್ರಗಳಿಗೆ ಅರಣ್ಯ ಇಲಾಖೆ ತಕರಾರು ತೆಗೆದಿತ್ತು. ಆನಂತರ ರಂಧ್ರಗಳ ಸಂಖ್ಯೆ 6ಕ್ಕೆ ಇಳಿಸಿ ಕೆಐಒಸಿಎಲ್ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.
ಒಟ್ಟು 6 ರಂಧ್ರಗಳನ್ನು ಮಾತ್ರವೇ ಕೊರೆಯುವುದಾಗಿ ಕಂಪನಿ ಸಲ್ಲಿಸಿದ್ದ ಪ್ರಸ್ತಾವವನ್ನು ಅರಣ್ಯ ಇಲಾಖೆ ಅಂತಿಮವಾಗಿ ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಜೂನ್ 12ರಂದು ಡಿಸಿಎಫ್ ಸ್ಥಳ ಪರಿಶೀಲನೆ ನಡೆಸಿದ್ದರು.
‘ಕೆಐಒಸಿಎಲ್ ಶೋಧ ಕಾರ್ಯ ಕೈಗೊಳ್ಳಲು ಉದ್ದೇಶಿಸಿದ್ದ ಪ್ರದೇಶವು ದಟ್ಟಾರಣ್ಯವಾಗಿದ್ದು, ಗಂಧದ ಮರಗಳ ಬೀಡಾಗಿದೆ. ಹುಲ್ಲುಗಾವಲನ್ನು ಹಾಸು ಹೊದ್ದಿದೆ. ಇದಿಷ್ಟೇ ಅಲ್ಲ, ನಾರಿಹಳ್ಳ ಜಲಾಶಯದ ಜಲಾನಯನ ಪ್ರದೇಶವಾಗಿದ್ದು, ಹಲವು ಝರಿ–ತೊರೆಗಳಿವೆ. ಖನಿಜ ಪತ್ತೆಗೆ ಕಂಪನಿ ಕೊರೆಯಲಿರುವ ಒಂದೊಂದು ರಂಧ್ರದ ಸುತ್ತಲೂ ಕನಿಷ್ಠ ಐದು ಮರಗಳು ಉರುಳಲಿವೆ. ಒಟ್ಟಾರೆ 13.81 ಎಕರೆ ಅರಣ್ಯ ಪ್ರದೇಶ ರಂಧ್ರ ಕೊರೆಯುವ ಕಾರ್ಯದಿಂದ ನಾಶವಾಗಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅಭಿಪ್ರಾಯಪಟ್ಟಿದ್ದರು.
ಅಲ್ಲದೆ, ‘ಈ ಪ್ರದೇಶ ಜೀವವೈವಿಧ್ಯದ ನೆಲೆಯಾಗಿದ್ದು, ಸಾಕಷ್ಟು ಔಷಧೀಯ ಸಸ್ಯಗಳಿವೆ. ಅರಣ್ಯ ಸಂರಕ್ಷಣೆ ಉದ್ದೇಶವಾಗಿಟ್ಟುಕೊಂಡು ಇಲ್ಲಿ ಖನಿಜ ನಿಕ್ಷೇಪ ಶೋಧ ಕಾರ್ಯಕ್ಕೆ ಅನುಮತಿ ನೀಡಬಾರದು’ ಎಂದು ಡಿಸಿಎಫ್ ಬಳ್ಳಾರಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ಸಲ್ಲಿಸಿದ್ದರು.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಸಲ್ಲಿಕೆಯಾದ ಡಿಸಿಎಫ್ ವರದಿ ಎತ್ತಿಹಿಡಿದಿರುವ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಕೆಐಒಸಿಎಲ್‌ನ ಪ್ರಸ್ತಾವವನ್ನು ನಿರಾಕರಿಸಿರುವುದಾಗಿ ಷರಾ ಬರೆದಿದ್ದಾರೆ. ಇದೇ ಪತ್ರವನ್ನು ಕೆಐಒಸಿಎಲ್‌ಗೆ ರವಾನಿಸಿದ್ದಾರೆ.
‘ಈಗ ಖನಿಜ ನಿಕ್ಷೇಪ ಪತ್ತೆಗೆ ಅವಕಾಶ ನೀಡಿದರೆ ಅದು ಮುಂದೊಂದು ದಿನ ಗಣಿಗಾರಿಕೆಗೆ ನೀಡಿದ ಅನುಮತಿಯೇ ಸರಿ. ಪ್ರಸ್ತಾವವನ್ನು ಈಗಲೇ ನಿರಾಕರಿಸಿರುವುದು ಸಂಭಾವ್ಯ ಅರಣ್ಯ ನಾಶವನ್ನು ಇಂದೇ ತಡೆದಂತೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
* ಹದ್ದಿನಪಡೆಯ 1,074 ಎಕರೆ ಅರಣ್ಯ ಅಪಾರ ಸಸ್ಯ–ಪ್ರಾಣಿ ಸಂಕುಲದ ಆಶ್ರಯ ತಾಣ * ಈ ಪ್ರದೇಶ ನಾರಿಹಳ್ಳ ಜಲಾಶಯಕ್ಕೆ ಜಲ ಮೂಲವೂ ಹೌದು * ಇಲ್ಲಿ ಖನಿಜ ಶೋಧಕ್ಕೆ ಕೆಐಒಸಿಎಲ್ ನೀಡಿರುವ ಪ್ರಸ್ತಾವನೆ ಪರಿಗಣಿಸಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.