ADVERTISEMENT

ಸಂಡೂರು: ಪರಿಶಿಷ್ಟರ ಜಮೀನು ವಶಪಡಿಸಿಕೊಂಡ ಅರಣ್ಯ ಇಲಾಖೆ

ರೈತರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:36 IST
Last Updated 15 ಜೂನ್ 2025, 15:36 IST
ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ ಪರಿಶಿಷ್ಟ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರು ದೌರ್ಜನ್ಯದಿಂದ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರೈತರು ಜಮೀನುಗಳಲ್ಲಿ ಭಾನುವಾರ ಕೆಲ ಕಾಲ ಪ್ರತಿಭಟನೆ ನಡೆಸಿದರು 
ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮದ ಪರಿಶಿಷ್ಟ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರು ದೌರ್ಜನ್ಯದಿಂದ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರೈತರು ಜಮೀನುಗಳಲ್ಲಿ ಭಾನುವಾರ ಕೆಲ ಕಾಲ ಪ್ರತಿಭಟನೆ ನಡೆಸಿದರು    

ಸಂಡೂರು: ತಾಲ್ಲೂಕಿನ ವಿಠಲಾಪುರ ಗ್ರಾಮದ ಪರಿಶಿಷ್ಟ ಜಾತಿಯ ಬಡ ರೈತರು ಕಂದಾಯ ದಾಖಲೆಗಳ ಅನುಸಾರ ಹಲವಾರು ದಶಕಗಳಿದಿಂದಲೂ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಏಕಾಏಕಿ ದೌರ್ಜನ್ಯ, ದಬ್ಬಾಳಿಕೆಯಿಂದ ರೈತರನ್ನು ಒಕ್ಕಲೆಬ್ಬಿಸಿ ಜಮೀನುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ರೈತರು, ಸಂಡೂರು ತಾಲ್ಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಭಾನುವಾರ ಅರಣ್ಯ ಇಲಾಖೆಯವರು ವಶಪಡಿಸಿಕೊಂಡ ಜಮೀನುಗಳಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಡೂರು ತಾಲ್ಲೂಕಿನ ಸಂಘಟನಾ ಸಂಚಾಲಕ ಎಂ.ರಾಮಕೃಷ್ಣ ಹೆಗೆಡೆ ಮಾತನಾಡಿ, ‘ಪರಿಶಿಷ್ಟ ಜಾತಿಯ 65 ಬಡ ಕುಟುಂಬಗಳು 100ಕ್ಕೂ ಹೆಚ್ಚು ವರ್ಷಗಳಿಂದ ಕಂದಾಯ ದಾಖಲೆಗಳಾದ ಕೈ ಬರಹ ಪಾಣಿಗಳನ್ನು ಹೊಂದಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಅರಣ್ಯ ಇಲಾಖೆಯವರು ಪರಿಶಿಷ್ಟ ಜಾತಿಯ ರೈತರ ಮೇಲೆ ಏಕಾಏಕಿ ದೌರ್ಜನ್ಯ, ದಬ್ಬಾಳಿಕೆಯಿಂದ ಪೊಲೀಸ್ ಭದ್ರತೆಯಲ್ಲಿ ಬಡ ರೈತರನ್ನು ಒಕ್ಕಲೆಬ್ಬಿಸಿ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದು ಸರಿಯಲ್ಲ’ ಎಂದರು.

‘ಅರಣ್ಯ ಇಲಾಖೆಯ ಕಾಯ್ದಿಟ್ಟ ಅರಣ್ಯ ಕೇವಲ 97ಎಕರೆಯಿದ್ದು, ಆದರೆ ಅರಣ್ಯ ಇಲಾಖೆಯವರು ಸುಮಾರು 400 ಎಕರೆಯ ಬಡ ಜನರ ಭೂಮಿಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದು ಕಾನೂನು ಬಾಹಿರವಾಗಿದ್ದು, ಕಂದಾಯ, ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ, ಅರ್ಹ ಬಡ ಜನರ ಭೂಮಿಗಳನ್ನು ತ್ವರಿತವಾಗಿ ಮರಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಮುಖಂಡರಾದ ಚೌಡಪ್ಪ, ಅಂತಾಪುರ ಗಂಗಾಧರ, ಗುರುಮೂರ್ತಿ, ಸಣ್ಣಬಾಬು, ರಾಮಪ್ಪ, ಮಹಾರುದ್ರಪ್ಪ, ಗ್ರಾಮದ ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.