ADVERTISEMENT

ಮನುಷ್ಯ–ಪ್ರಾಣಿ ಸಂಘರ್ಷಕ್ಕೆ ಕಾಡು ಕಬಳಿಕೆ ಕಾರಣ: ನ್ಯಾ. ನಟರಾಜ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:00 IST
Last Updated 11 ಡಿಸೆಂಬರ್ 2025, 6:00 IST
ದರೋಜಿ ಕರಡಿ ಸಂರಕ್ಷಣಾ ಪ್ರದೇಶದಲ್ಲಿ ಆಯೋಜಿಸಿದ್ದ ‘ಮಾನವ-ವನ್ಯಜೀವಿಗಳ ಸಂಘರ್ಷ’ ಕುರಿತ ಕಾರ್ಯಾಗಾರದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಆರ್. ನಟರಾಜ್ ಮಾತನಾಡಿದರು
ದರೋಜಿ ಕರಡಿ ಸಂರಕ್ಷಣಾ ಪ್ರದೇಶದಲ್ಲಿ ಆಯೋಜಿಸಿದ್ದ ‘ಮಾನವ-ವನ್ಯಜೀವಿಗಳ ಸಂಘರ್ಷ’ ಕುರಿತ ಕಾರ್ಯಾಗಾರದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಆರ್. ನಟರಾಜ್ ಮಾತನಾಡಿದರು   

ಬಳ್ಳಾರಿ: ‘ಮಾನವ ಸಮುದಾಯದ ಬೆಳವಣಿಗೆ ಮತ್ತು ವನ್ಯಜೀವಿಗಳ ಆವಾಸಗಳ ನಷ್ಟದಿಂದಾಗಿ, ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷ ತೀವ್ರಗೊಳ್ಳುತ್ತಿದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್. ನಟರಾಜ್ ಅಭಿಪ್ರಾಯಪಟ್ಟರು. 

ದರೋಜಿ ಕರಡಿ ಸಂರಕ್ಷಣಾ ಪ್ರದೇಶದಲ್ಲಿ ಭಾನುವಾರ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ನ್ಯಾಯಾಂಗ, ಅರಣ್ಯ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆದ ‘ಮಾನವ-ವನ್ಯಜೀವಿಗಳ ಸಂಘರ್ಷ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ  ಕಾಡು ಕಡಿಮೆಯಾಗುತ್ತಿದೆ. ಇದರಿಂದ ವನ್ಯಜೀವಿಗಳಿಗೆ ಇರಲು ಜಾಗವಿಲ್ಲದೆ ಆಹಾರ, ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತಿವೆ. ಇದು ಸಂಘರ್ಷವಾಗಿ ಮಾರ್ಪಡುತ್ತಿದೆ. ಇದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕಿದೆ. ತರಬೇತಿ ಪಡೆದ ಅರಣ್ಯ ಸಿಬ್ಬಂದಿ ಮತ್ತು ‘ಅರಣ್ಯ ಮಿತ್ರ’ ರನ್ನು ಒಳಗೊಂಡ ಕ್ಷಿಪ್ರ ಸ್ಪಂದನ ತಂಡಗಳು ಸದಾ ಸಿದ್ಧವಾಗಿರಬೇಕು. ನಷ್ಟ ಮತ್ತು ಜೀವ ಹಾನಿ ಸಂಭವಿಸಿದಾಗ ಸರ್ಕಾರವು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಪರಿಹಾರ ನೀಡಬೇಕು. ವನ್ಯಜೀವಿಗಳಿಗೆ ಕಾಡಿನೊಳಗೇ ನೀರು, ಆಹಾರ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು. 

ADVERTISEMENT

ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಕೆ. ಜಿ ಶಾಂತಿ ಮಾತನಾಡಿ, ‘ಅರಣ್ಯವನ್ನು ಒತ್ತುವರಿ ಮಾಡದಿದ್ದರೆ ಪ್ರಾಣಿಗಳು ನಾಡಿಗೆ ಬರುವುದಿಲ್ಲ. ಈ ಬಗ್ಗೆ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ವನ್ಯಜೀವಿ ಸಂಘರ್ಷ ನಿರ್ವಹಣೆಯಲ್ಲಿರುವ ಹೊಸ ತಂತ್ರಜ್ಞಾನಗಳು, ಯಶಸ್ವಿ ಉದಾಹರಣೆಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ತಜ್ಞರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು. ಕಾಡಂಚಿನ ಪ್ರದೇಶಗಳ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವರ ಸಹಕಾರ ಪಡೆಯುವುದು ಮುಖ್ಯ. ಪರಿಹಾರ, ಮುನ್ನೆಚ್ಚರಿಕೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿದರೆ ಈ ಕಾರ್ಯಾಗಾರ ಯಶಸ್ವಿಯಾದಂತೆ’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ವಿಜಯನಗರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ್.ಕೆ.ಎನ್, ವಿಜಯನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಎಚ್., ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಇತರರು ಹಾಜರಿದ್ದರು.