
ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಅನಿರೀಕ್ಷಿತವಾಗಿ ತಪಾಸಣೆ ಕೈಗೊಂಡಾಗ ನಿಷೇಧಿತ ವಸ್ತುಗಳು ದೊರೆತಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ನಿರ್ದೇಶನದ ಮೇರೆಗೆ ‘ಕಾರಾಗೃಹ ಸುಧಾರಣಾ ಸಂಕಲ್ಪ’ ಅಭಿಯಾನದಡಿ ಡಿ.17ರ ರಾತ್ರಿ 9ರಿಂದ 10.30ರವರೆಗೆ ಕಾರಾಗೃಹದ ಒಳಗೆ ಅನಿರೀಕ್ಷಿತ ತಪಾಸಣೆ ನಡೆಸಲಾಗಿದ್ದು, 4 ಕೀ-ಪ್ಯಾಡ್ ಮೊಬೈಲ್, 1 ಚಾರ್ಜರ್, 3 ಯುಎಸ್‌ಬಿ ಕನೆಕ್ಟರ್ ಕೇಬಲ್, 1 ಇಯರ್ ಫೋನ್ ಪತ್ತೆಯಾಗಿವೆ ಎಂದು ಅಧೀಕ್ಷಕರು ಹೇಳಿದ್ದಾರೆ.
ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಿದವರು, ಇದಕ್ಕೆ ಸಹಕರಿಸಿದವರು ಹಾಗೂ ನಿಷೇಧಿತ ವಸ್ತುಗಳನ್ನು ಉಪಯೋಗಿಸಿದವರ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022ರ ಕಲಂ 42ರನ್ವಯ ಹಾಗೂ ಇತರೆ ಕಲಂಗಳಡಿ ಕ್ರಮ ಕೈಗೊಳ್ಳಲು ಬಳ್ಳಾರಿಯ ಬೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಸಿಬ್ಬಂದಿಗೆ ಬಹುಮಾನ: ತಪಾಸಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಡಿಜಿಪಿ ಅಲೋಕ ಕುಮಾರ್ ಅವರು, ತಂಡಕ್ಕೆ ₹10,000 ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಿದ್ದಾರೆ ಎಂದು ಕೇಂದ್ರ ಕಾರಾಗೃಹ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.