ADVERTISEMENT

ಪರಿಹಾರ ನಿಧಿಗೆ ದೇಣಿಗೆ ಕೊಡುವವರಿಗೆ ಉಚಿತ ಸೇವೆ

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಕೃಷ್ಣರೆಡ್ಡಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 12:59 IST
Last Updated 9 ಆಗಸ್ಟ್ 2019, 12:59 IST

ಹೊಸಪೇಟೆ: ’ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ಸಲ್ಲಿಸುವವರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಗಳ ಮೂಲಕ ಹಣ ಪಾವತಿಸಿದರೆ ಸೇವಾ ಶುಲ್ಕ ವಿಧಿಸುವುದಿಲ್ಲ‘ ಎಂದು ಸಹಕಾರಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಚ್‌. ಕೃಷ್ಣ ರೆಡ್ಡಿ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಪ್ರವಾಹದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾವು ನೋವು ಉಂಟಾಗಿದೆ. ಅನೇಕ ಜನ ಆಸ್ತಿ ಕಳೆದುಕೊಂಡಿದ್ದಾರೆ. ಅವರಿಗೆ ನೆರವಿನ ಹಸ್ತ ಚಾಚಲು ನಿರ್ಧರಿಸಲಾಗಿದೆ. ಸಹಕಾರಿ ವತಿಯಿಂದ ಸಂತ್ರಸ್ತರ ನೆರವಿಗೆ ಪರಿಹಾರ ಸಂಗ್ರಹಿಸಲು ಖಾತೆ ತೆರೆಯಲಾಗುವುದು. ಆಸಕ್ತರು ನಮ್ಮ ಬ್ಯಾಂಕು ಅಥವಾ ನೇರವಾಗಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಜಮೆ ಮಾಡಬಹುದು. ಅದಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು‘ ಎಂದು ಮನವಿ ಮಾಡಿದರು.

’ಹೊಸಪೇಟೆ ನಗರದಲ್ಲಿ ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕಿನ ಮೂಲಕ ಪರಿಹಾರ ನಿಧಿಗೆ ಹಣ ನೀಡಬಹುದು. ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬರೂ ನೆರವು ನೀಡಬೇಕು. ಸಂಯುಕ್ತ ಸಹಕಾರಿಯಿಂದಲೂ ಶೀಘ್ರದಲ್ಲೇ ಸಭೆ ಸೇರಿ, ನೆರವು ನೀಡಲಾಗುವುದು‘ ಎಂದು ಮಾಹಿತಿ ನೀಡಿದರು.

ADVERTISEMENT

’ನಮ್ಮ ಸಹಕಾರಿ 18 ವರ್ಷ ಪೂರೈಸಿದೆ. 19ನೇ ವರ್ಷದ ಸಾಮಾನ್ಯ ಸಭೆ ಬೆಂಗಳೂರಿನ ವಿಜಯನಗರ ವೀರಶೈವ ಸಮುದಾಯ ಭವನದಲ್ಲಿ ಸೆಪ್ಟೆಂಬರ್‌ 18ರಂದು ನಡೆಯಲಿದೆ. ಸಹಕಾರ ಕ್ಷೇತ್ರದಲ್ಲಿ 50 ಲಕ್ಷ ಜನ ಇದ್ದಾರೆ. 50 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ₹18 ಸಾವಿರ ಕೋಟಿ ದುಡಿಯುವ ಬಂಡವಾಳ ಇದೆ. ಶಿಕ್ಷಣ, ತರಬೇತಿ ಮತ್ತು ನಿಯಂತ್ರಣ ವ್ಯವಸ್ಥೆ ಅಳವಡಿಸಿಕೊಂಡು ಸಹಕಾರಿ ಕೆಲಸ ಮಾಡುತ್ತಿದೆ‘ ಎಂದು ವಿವರಿಸಿದರು.

’ಸಹಕಾರಿ ಕಾಯ್ದೆಗಳಲ್ಲಿ ಹಲವು ನ್ಯೂನತೆಗಳಿವೆ. ಅವುಗಳನ್ನು ತೆಗೆದು ಹಾಕಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅವುಗಳನ್ನು ತೆಗೆದು ಹಾಕಿದರೆ ಸಹಕಾರ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ‘ ಎಂದು ಅಭಿಪ್ರಾಯಪಟ್ಟರು.

ನಿರ್ದೇಶಕರಾದ ಬಿ. ರಾಜಶೇಖರ್‌, ಅಂಬಲಿ ಮಂಜುನಾಥ, ವಿಕಾಸ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.